*ಗೋಣಿಕೊಪ್ಪ, ಮಾ. ೭: ಸಾಮಾಜಿಕ ಕಳಕಳಿಯನ್ನು ಯುವ ಸಮುದಾಯ ಹೊಂದುವ ಮೂಲಕ ನೊಂದವರ ಧ್ವನಿಯಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಬಿಂಬಿತವಾಗಬೇಕು ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದರು.

ಅರುವತ್ತೊಕ್ಲು ಸರ್ವದೈವತಾ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸೀಗೆತೋಡು ಇಂಡಿಯನ್ ಯುವ ಸಂಘ, ತಾಲೂಕು ಯುವ ಒಕ್ಕೂಟಗಳ ಆಶ್ರಯದಲ್ಲಿ ನಡೆದ ಜಿಲ್ಲಾ ಯುವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಕ ಸಂಘಗಳು ಕಾರ್ಯಕ್ರಮಗಳಿಗೆ ಸೀಮಿತವಾಗದೇ ಸಮಾಜದ ಮುಖ್ಯ ವಾಹಿನಿಯಲ್ಲಿ ಸಾಮಾಜಿಕ ಕಾಳಜಿಯನ್ನು ಹೊಂದುವ ಮೂಲಕ ನೊಂದವರನ್ನು ಮುಖ್ಯ ವಾಹಿನಿಗೆ ತರುವ ವ್ಯವಸ್ಥೆಯಡಿ ಕಾರ್ಯನಿರ್ವಹಿಸಬೇಕು. ಯುವ ಸಮುದಾಯ ಒಗ್ಗಟ್ಟಿನಿಂದ ಗಟ್ಟಿತನವನ್ನು ಪ್ರದರ್ಶಿಸಿದರೆ ದೇಶ ಮತ್ತು ಸಮಾಜ ಭದ್ರತೆಯನ್ನು ಹೊಂದುತ್ತದೆ ಎಂದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಒದಗಿಸಿಕೊಡಲು ಸಾಧ್ಯವಾಗಿಲ್ಲ. ಕೊರೊನಾ ಮತ್ತು ಉತ್ತರ ಕರ್ನಾಟಕದ ಪ್ರಕೃತಿ ವಿಕೋಪದಿಂದ ಅನುದಾನ ನೀಡಲು ಕೊರತೆ ಕಾಡಿದೆ. ಮುಂದಿನ ಅವಧಿಯಲ್ಲಿ ಹೆಚ್ಚಿನ ಅನುದಾನ ಒದಗಿಸಿಕೊಟ್ಟು ಯುವ ಸಮುದಾಯದ ಕ್ರಿಯಾತ್ಮಕ ಚಟುವಟಿಕೆಗೆ ಸಹಕಾರ ನೀಡುವುದಾಗಿ ಭರವಸೆಯಿತ್ತರು.

ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಮಾತನಾಡಿ, ಇಚ್ಚಾಶಕ್ತಿಯೊಂದಿಗೆ ಕೆಲಸ ಮಾಡಿದರೆ ಯುವ ಶಕ್ತಿ ದೇಶದ ಆಸ್ತಿಯಾಗಬಲ್ಲದು. ಯುವಕ ಹಾಗೂ ಯುವತಿ ಮಂಡಳಿ ಸಂಘ ಸಂಸ್ಥೆಗಳು ಗ್ರಾಮದಲ್ಲಿ ಹಿತ ಕಾಪಾಡಿಕೊಳ್ಳುವಂತಹ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಪ್ರಸ್ತಾವಿಕ ನುಡಿಗಳಲ್ಲಿ ಯುವ ಸಮುದಾಯದ ಸಾಮಾಜಿಕ ಕಳಕಳಿ ಮತ್ತು ಸ್ಫೂರ್ತಿದಾಯಕ ಕಾರ್ಯಕ್ರಮಗಳಿಗೆ ಸರ್ಕಾರ ನೀಡುವ ಅನುದಾನ ಸಾಕಾಗುತ್ತಿಲ್ಲ. ಅಲ್ಲದೇ ವಿವೇಕಾನಂದರ ಜಯಂತಿಯನ್ನು ಯುವಕರ ಆದರ್ಶ ಸ್ಫೂರ್ತಿಯಾಗಿ ಆಚರಿಸಲು ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ಕನಿಷ್ಟ ಕಾರ್ಯಕ್ರಮಕ್ಕೆ ಎರಡು ಲಕ್ಷದ ಅನುದಾನವನ್ನು ಒದಗಿಸಿಕೊಡುವ ವ್ಯವಸ್ಥೆ ಮಾಡಬೇಕಾಗಿದೆ. ಇದಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರ ಸಹಕಾರ ಬಹುಮುಖ್ಯವಾಗಿದ್ದು, ಯುವ ಸಮುದಾಯದ ಸಾಮಾಜಿಕ ಚಟುವಟಿಕೆಗೆ ಹೆಚ್ಚಿನ ಅನುದಾನವನ್ನು ಒದಗಿಸಿಕೊಡಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಸೀಗೆತೋಡು ಇಂಡಿಯನ್ ಯುವಕ ಸಂಘದ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಯುವ ಸಮಾವೇಶದ ಜಿಲ್ಲಾ ಯುವ ಸಂಘ ಪ್ರಶಸ್ತಿಯನ್ನು ಚೆಂಬು ಗ್ರಾಮದ ಭಗವಾನ್ ಯುವಕ ಸಂಘ ಪಡೆದುಕೊಂಡಿತು. ಶಾಸಕರು ಹಾಗೂ ಮುಖ್ಯ ಅತಿಥಿಗಳು ಸಂಘದ ಪದಾಧಿಕಾರಿಗಳಿಗೆ ೨೦೨೦-೨೧ನೇ ಸಾಲಿನ ಪ್ರಶಸ್ತಿ ಹಾಗೂ ೨೫ ಸಾವಿರ ನಗದು ಹಾಗೂ ಪ್ರಮಾಣ ಪತ್ರವನ್ನು ವಿತರಿಸಿದರು.

ಇದೇ ಸಂದರ್ಭ ತಾಲೂಕಿನ ಆಯ್ದ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ ಮಾಡಲಾಯಿತು.

ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ, ಗ್ರಾ.ಪಂ. ಸದಸ್ಯ ಮಹೇಶ್, ಸರ್ವದೈವತಾ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಕಾಡ್ಯಮಾಡ ಆದಿತ್ಯ ಅಯ್ಯಪ್ಪ, ಜಿಲ್ಲಾ ಯುವ ಒಕ್ಕೂಟದ ಸಲಹೆಗಾರರಾದ ರಾಣಿಮಾಚಯ್ಯ, ಕಂದಾದೇವಯ್ಯ ಉಪಸ್ಥಿತರಿದ್ದರು.