(ಪುತ್ತರಿರ ಕರುಣ್ ಕಾಳಯ್ಯ)

ಚೆಟ್ಟಳ್ಳಿ, ಮಾ. ೭: ಬೋಳುತಲೆ, ಉದ್ದನೆಯ ಕತ್ತು, ಕತ್ತಿನ ಸುತ್ತ ಬಿಳಿಯ ಗರಿ, ಕಂದು ಬಣ್ಣದ ಮೈ, ಮಾಂಸ ಕತ್ತರಿಸುವ ಬಲಿಷ್ಠ ಕೊಕ್ಕು, ವಿಶಾಲ ರೆಕ್ಕೆ, ಭಯ ಹುಟ್ಟಿಸುವ ಕಣ್ಣುಗಳನ್ನು ಹೊತ್ತ ಬೃಹತ್ ಗಾತ್ರದ ಅಳಿವಿನಂಚಿನಲ್ಲಿದ್ದ ಅಪರೂಪದ ರಣಹದ್ದುಗಳು (ವಲ್ಚರ್) ದುಬಾರೆ, ಮಾಲ್ದಾರೆ ಹಾಗೂ ನಾಗರಹೊಳೆಯ ಮೀಸಲು ಅರಣ್ಯದಲ್ಲಿ ವನ್ಯ ಜೀವಿಗಳು ಮೃತಪಟ್ಟಾಗ ಸುಮಾರು ೧೦೦ - ೧೫೦ ಸಂಖ್ಯೆಯಲ್ಲಿ ಪ್ರತ್ಯಕ್ಷವಾಗುತ್ತಿವೆ.

ಜಾನುವಾರುಗಳ ಶುಶ್ರೂಷೆ ಸಂದರ್ಭ ಬಳಸಲಾಗುವ ‘ಡೈಕೋಫಿನಾಕ್’ ಬಳಕೆಯಿಂದ ಅಂತಹ ಜಾನುವಾರುಗಳು ಸಾವನ್ನಪ್ಪಿದ ಬಳಿಕ ಅವುಗಳನ್ನು ತಿಂದ

(ಮೊದಲ ಪುಟದಿಂದ) ರಣಹದ್ದುಗಳು, ಸಂಧಿವಾತ ಹಾಗೂ ಮೂತ್ರಕೋಶ ವೈಫಲ್ಯದಿಂದ ದಿಢೀರ್ ಸಾವನ್ನಪ್ಪುತ್ತಿದ್ದು ಸಂರಕ್ಷಣಾ ತಜ್ಞರ ನಿದ್ದೆಗೆಡಿಸಿತ್ತು. ಈ ರಣಹದ್ದುಗಳ ರಕ್ಷಣೆಗಾಗಿ ೨೦೦೬ ನಲ್ಲಿ ಹದ್ದುಗಳ ಪ್ರಥಮ ಸಂರಕ್ಷಣಾ ಯೋಜನೆಯ ಮೂಲಕ ಜಾನುವಾರುಗಳ ಚಿಕಿತ್ಸೆಗೆ ‘ಡೈಕೋಫಿನಾಕ್’ ಬಳಕೆಯನ್ನು ನಿಷೇಧಿಸಲಾಯಿತು. ಆದರೂ ವನ್ಯಜೀವಿ ಹಾಗೂ ಜಾನುವಾರುಗಳು ಸತ್ತ ತಕ್ಷಣ ಹಿಂಡುಹಿAಡಾಗಿ ಬಂದು ಅವನೆಲ್ಲ ತಿಂದು ಪರಿಸರವನ್ನು ನೈರ್ಮಲ್ಯಗೊಳಿಸುತ್ತಿದ್ದ ರಣಹದ್ದುಗಳು ಅಳಿವಿನಂಚಿಗೆ ತಲುಪಿದವು.

ಆದರೆ ಕಳೆದ ಮೂರು ವರ್ಷಗಳಿಂದ ದುಬಾರೆಯ ಮೀಸಲು ಅರಣ್ಯದಲ್ಲಿ ಬೋಳು ತಲೆ, ಉದ್ದನೆಯ ಕತ್ತಿನÀ ರಣಹದ್ದುಗಳು ಕಂಡುಬರುತ್ತಿದ್ದು ಪ್ರಸ್ತುತ ೧೫೦ಕ್ಕೂ ಹೆಚ್ಚು ರಣಹದ್ದುಗಳು ಈ ವ್ಯಾಪ್ತಿಯಲ್ಲಿದೆ.

ರಾಮನಗರದ ರಾಮದೇವರ ಬೆಟ್ಟದ ವ್ಯಾಪ್ತಿಯಲ್ಲಿ ರಣಹದ್ದುಗಳ ವಾಸಸ್ಥಾನವಿದ್ದ ಕಾರಣ ಈ ಬೆಟ್ಟದ ವ್ಯಾಪ್ತಿಯನ್ನು ರಣಹದ್ದು ವನ್ಯಧಾಮವೆಂದು ಘೋಷಿಸಿ ರಣಹದ್ದುಗಳ ಸಂತಾನಾಭಿವೃದ್ದಿಗೆ ಸರಕಾರ ಒತ್ತುನೀಡುತ್ತಿದೆ. ಅದೇ ರೀತಿ ಹಲವು ವರ್ಷಗಳಿಂದ ಅಳಿವಿನ ಅಂಚಿಗೆ ತಲುಪಿದ ಪರಿಸರ ಸ್ನೇಹಿಯಾದ ರಣಹದ್ದುಗಳು ಕೊಡಗು ಜಿಲ್ಲೆಯಲ್ಲಿಯೂ ಸಂತಾನ ಅಭಿವೃದ್ಧಿಗೊಳ್ಳುತ್ತಿದ್ದು ಅರಣ್ಯ ಇಲಾಖೆ ಹೆಚ್ಚಿನ ನಿಗಾವಹಿಸಬೇಕಿದೆ.

ಹಳ್ಳಿಗಳಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುವುದರೊಂದಿಗೆ ಜಾನುವಾರುಗಳು ಹಾಗೂ ಇತರ ಪ್ರಾಣಿಗಳನ್ನು, ಅವುಗಳು ಸತ್ತ ನಂತರ ದೇಹವನ್ನು ಸುಡುವುದು ಹಾಗೂ ಹೂತು ಹಾಕುವುದರಿಂದ ರಣಹದ್ದುಗಳಿಗೆ ಆಹಾರದ ಕೊರತೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸೂಕ್ತ ಪರಿಹಾರ ಒದಗಿಸಬೇಕಿದೆ.