ಸೋಮವಾರಪೇಟೆ, ಮಾ. ೬: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ.ಚಂದ್ರು ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿಯ ೨೦೨೨-೨೩ನೇ ಸಾಲಿಗೆ ಆಯವ್ಯಯ ತಯಾರಿಸುವ ಬಗ್ಗೆ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳೊಂದಿಗೆ ಮೂಲಭೂತ ಅವಶ್ಯಕತೆಗಳ ಈಡೇರಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಅಭಾವ ಉಂಟಾಗದAತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.
ಪಟ್ಟಣದಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು, ತ್ಯಾಜ್ಯ ಸಂಗ್ರಹಕ್ಕೆ ಸ್ಥಳೀಯ ಆಡಳಿತದಿಂದ ಹೆಚ್ಚಿನ ಅನುಕೂಲತೆ ಮಾಡಿಕೊಟ್ಟರೂ ಬಹುತೇಕರು ಸಿಕ್ಕ ಸಿಕ್ಕಲ್ಲಿ ಕಸ ಎಸೆಯುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಯಾರೂ ಸಹ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಬಾರದು. ಪಟ್ಟಣದ ಸ್ವಚ್ಛತೆ ಎಲ್ಲರ ಕರ್ತವ್ಯ ಎಂಬುದನ್ನು ಅರಿಯಬೇಕೆಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಹೇಳಿದರು.
ಸ್ಮಶಾನ ಅಭಿವೃದ್ಧಿ ಸಮಿತಿಯನ್ನು ರಚಿಸಿದರೆ ಸ್ಮಶಾನ ನಿರ್ವಹಣೆಗೆ ಅನುಕೂಲವಾಗಲಿದೆ. ಪಟ್ಟಣದ ಸಿ.ಕೆ.ಸುಬ್ಬಯ್ಯ ರಸ್ತೆ ಬದಿಯ ಚರಂಡಿ, ಹೈಟೆಕ್ ಮಾರುಕಟ್ಟೆ, ವಿವೇಕಾನಂದ ವೃತ್ತದ ಬಳಿ ಹೈಮಾಸ್ಟ್ ಲ್ಯಾಂಪ್ ದುರಸ್ತಿ, ಪಟ್ಟಣದ ಮಹಿಳಾ ಸಮಾಜದ ಬಳಿ ಬಂಡೆಕಲ್ಲು ತೆರವಿಗೆ ಕ್ರಮ ವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಂತೆ ದಿನವಾದ ಸೋಮವಾರದಂದು ವರ್ತಕರು ಬೆಳಿಗ್ಗೆಯಿಂದ ಸಂಜೆಯವರೆಗೆ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡುತ್ತಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಸಮರ್ಪಕವಾಗಿ ವಾಹನ ನಿಲುಗಡೆಗೆ ಕ್ರಮ ತೆಗೆದುಕೊಳ್ಳಬೇಕೆಂದು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮನವಿ ಮಾಡಿದರು.
ಮಾಜಿ ಅಧ್ಯಕ್ಷರುಗಳಾದ ಸುಮಾ ಸುದೀಪ್, ಲೀಲಾ ನಿರ್ವಾಣಿ, ರೋಟರಿ ಅಧ್ಯಕ್ಷ ಪ್ರಕಾಶ್,ಲಯನ್ಸ್ ಸಂಸ್ಥೆ ಅಧ್ಯಕ್ಷ ಸಿ.ಕೆ ಮಲ್ಲಪ್ಪ, ಜೇಸೀ ಸಂಸ್ಥೆ ಅಧ್ಯಕ್ಷ ನೆಲ್ಸನ್, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ರವಿ ಸೇರಿದಂತೆ ಇತರರು ಪಟ್ಟಣದ ಅಭಿವೃದ್ಧಿಗೆ ಸಂಬAದಿಸಿದAತೆ ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.