ಕುಶಾಲನಗರ, ಮಾ. ೬ : ಶಿವಮೊಗ್ಗದಲ್ಲಿ ಹಿಂದೂ ಯುವಕ ಹರ್ಷ ಹತ್ಯೆ ಖಂಡಿಸಿ ಕುಶಾಲನಗರ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ, ತಾಲೂಕು ಮತ್ತು ನಗರ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮತ್ತು ಎಸ್ಡಿಪಿಐ ವಿರುದ್ಧ ಘೋಷಣೆ ಕೂಗಲಾಯಿತು.
ಕಾಂಗ್ರೆಸ್ ಪಕ್ಷವು ರಾಜ್ಯದ ಅಭಿವೃದ್ಧಿ ಪರ ಮಾತನಾಡದೇ ಮತ ಕ್ರೋಡೀಕರಣಕ್ಕಾಗಿ ಜಾತಿ, ಧರ್ಮದ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಕಾಂಗ್ರೆಸ್ ಪಕ್ಷ ತಮ್ಮ ಅಸ್ತಿತ್ವಕ್ಕಾಗಿ ಪರದಾಡುತ್ತಿದೆ. ಕಲಾಪದಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬAಧಿಸಿದAತೆ ಮಾತನಾಡದೇ, ಒಂದು ಕೋಮಿನ ವೋಟ್ ಪಡೆಯುವ ದುರುದ್ದೇಶ ದೊಂದಿಗೆ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಈಶ್ವರಪ್ಪನವರ ಹೇಳಿಕೆಯನ್ನು ರಾಜಕೀಯ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಜನರ ಬಗ್ಗೆ ಕಾಳಜಿಯಿಲ್ಲ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಅವರು ಅಧಿಕಾರವನ್ನು ಕಳೆದುಕೊಂಡಿದ್ದಾರೆ ಎಂದರು.
ಬಿಜೆಪಿ ಮುಖಂಡ ಭಾರತೀಶ್ ಮಾತನಾಡಿ, ಮುಸ್ಲಿಂ ಮತಗಳು ಕಾಂಗ್ರೆಸ್ ಬಿಟ್ಟು ಎಸ್.ಡಿ.ಪಿ.ಐ ನತ್ತ ಸಾಗುತ್ತಿರುವುದನ್ನು ಕಂಡು ರಾಜ್ಯದ ಕಾಂಗ್ರೆಸ್ಸಿನ ಪ್ರಮುಖರು ಆತಂಕಕ್ಕೀಡಾಗಿದ್ದಾರೆ. ಕಾಂಗ್ರೆಸ್ ಪಕ್ಷ ಮುಸ್ಲಿಮರ ವೋಟನ್ನು ಪಡೆಯಲು ವಿನೂತನ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ಬಿಜೆಪಿ ಎಂದಿಗೂ ರಾಷ್ಟ್ರೀಯತೆ ಮತ್ತು ರಾಷ್ಟ್ರದ ಜನತೆ ಪರವಾಗಿರಲಿದೆ ಎಂದರು.
ಈ ಸಂದರ್ಭ ಸೋಮವಾರಪೇಟೆ ತಾಲ್ಲೂಕು ಮಂಡಲ ಅಧ್ಯಕ್ಷ ಮನು ರೈ, ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಗೌತಮ್, ಮೋಕ್ಷಿತ್, ತಾಲ್ಲೂಕು ವಕ್ತಾರ ಕೆ.ಜಿ. ಮನು, ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ಕೂಡುಮಂಗಳೂರು ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ.ಚಂದ್ರು, ಕುಡಾ ಅಧ್ಯಕ್ಷ ಚರಣ್, ಶಿವಾಜಿ, ಎಂ ಎನ್ ಕುಮಾರಪ್ಪ, ಬಾಲಾಜಿ, ವೇದಾವತಿ, ಪುಷ್ಪ, ರುದ್ರಾಂಬಿಕೆ, ನವನೀತ್ ಮತ್ತು ಇತರರು ಇದ್ದರು.