ಮಡಿಕೇರಿ, ಮಾ. ೬: ರಾಜ್ಯ ಅನುದಾನಿತ ಶಾಲಾ-ಕಾಲೇಜು ನೌಕರರಿಂದ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಕೊಡಗು ಜಿಲ್ಲಾ ನೌಕರರು ಸಹ ಬಾಗಿಯಾಗಿದ್ದರು.

೨೦೦೬ರ ನಂತರ ನೇಮಕವಾದ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆ ಜಾರಿಗೊಳಿ ಸಲಾಗಿದೆ. ಆದರೆ ಅನುದಾನಿತ ಶಾಲಾ-ಕಾಲೇಜು ನೌಕರರಿಗೆ ಈ ಯೋಜನೆ ಜಾರಿ ಮಾಡದೆ ಇರುವುದರಿಂದ ಅನುದಾನಿತ ನೌಕರರು ನಿವೃತ್ತಿಯ ನಂತರ ಜೀವನ ನಡೆಸಲು ಪಿಂಚಣಿ ಇಲ್ಲದಿರುವುದರಿಂದ ಆರ್ಥಿಕ ವ್ಯವಸ್ಥೆಗೆ ಪರದಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಯಿತು.

ಅನುದಾನಿತ ಶಾಲಾ ನೌಕರರಿಗೂ ನೂತನ ಪಿಂಚಣಿ ಯೋಜನೆ ಜಾರಿಗೆ ಜ್ಯೋತಿ ಸಂಜೀವಿನಿ ಯೋಜನೆಯನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವಂತಹ ಸೌಲಭ್ಯವನ್ನು ಅನುದಾನಿತ ಶಾಲೆಗಳಿಗೂ ನೀಡುವಂತೆ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಖಾಲಿ ಹುದ್ದೆಗಳನ್ನು ತುಂಬಲು ಮತ್ತು ಅನುದಾನಿತ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿಭಾಗಕ್ಕೆ ಪಸ್ತುತ ಇರುವ ಹಿರಿಯ ಸಹಾಯಕ ಅಧ್ಯಾಪಕರ ಹುದ್ದೆಗಳನ್ನು ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ, ಶಾಲಾ ನವೀಕರಣ ನಿಯಮ ಸರಳೀಕರಣ ಮಾಡುವಂತೆ ಹೀಗೆ ಹತ್ತು ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅನುದಾನಿತ ಶಾಲಾ-ಕಾಲೇಜು ನೌಕರರ ಸಂಘವು ಬೆಂಗಳೂರು ಫ್ರೀಡಂ ಪಾರ್ಕನಲ್ಲಿ ಪ್ರತಿಭಟನಾ ರಾಲಿಯನ್ನು ಆಯೋಜಿಸಿತ್ತು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನೌಕರರ ಮನವಿ ಪತ್ರ ಸ್ವೀಕರಿಸಿದ ಶಿಕ್ಷಣ ಸಚಿವ ನಾಗೇಶ್, ಮುಖ್ಯಮಂತ್ರಿಗಳ ಗಮನಕ್ಕೆ ಸಮಸ್ಯೆಗಳನ್ನು ತರುವ ಆಶ್ವಾಸನೆ ನೀಡಿದರು. ನಂತರ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ್ ನಾರಾಯಣ್ ಅವರನ್ನು ಭೇಟಿ ಮಾಡಿದ ರಾಜ್ಯ ಅನುದಾನಿತ ನೌಕರರ ಸಂಘದ ನಿಯೋಗ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಪತ್ರ ನೀಡಿದರು.

ಕೊಡಗು ಜಿಲ್ಲಾ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘಟನೆಗಳ ಒಕ್ಕೂಟವು ಬೆಂಬಲಿಸಿ ಕೊಡಗು ಜಿಲ್ಲಾ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್ ನೇತೃತ್ವದಲ್ಲಿ ಭಾಗವಹಿಸಿದ್ದು, ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ವೆಂಕಟೇಶ್ ಪೂಜಾರ್, ವೀರಾಜಪೇಟೆ ಶೈಕ್ಷಣಿಕ ತಾಲೂಕು ಘಟಕದ ಅಧ್ಯಕ್ಷ ರೋಹಿತ್, ಕಾರ್ಯದರ್ಶಿ ಗಿಡ್ಡಯ್ಯ, ಮಡಿಕೇರಿ ಘಟಕದ ಅಧ್ಯಕ್ಷ ಶಿವಪ್ರಸಾದ್, ಕಾರ್ಯದರ್ಶಿ ತಿಪ್ಪೇಸ್ವಾಮಿ, ಹಿರಿಯ ಶಿಕ್ಷಕರಾದ ಜೈಕುಮಾರ್, ಸಿದ್ದರೂಡ ತಳವಾರ್, ಆದರ್ಶ್, ಚನ್ನಯ್ಯ ಸೇರಿದಂತೆ ಜಿಲ್ಲೆಯ ಒಟ್ಟು ೪೬ ಅನುದಾನಿತ ಪ್ರೌಢಶಾಲೆಗಳ ೩೫೧ ನೌಕರರ ಪೈಕಿ ೧೦೭ ನೌಕರರು ಭಾಗವಹಿಸಿದ್ದರು.