ಚೆಟ್ಟಳ್ಳಿ, ಮಾ. ೬: ಜಿಂಕೆ ಕೊಂಬನ್ನು ಹಿಡಿದು ಹೋವಯ್ಯ ಹೋ...ಹೋವಯ್ಯ ಹೋ..ಎನ್ನುತಾ ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟ ಊರಿನವರು ೧೮ ತರಹದ ವಿಶಿಷ್ಟ ಬಗೆಯ ಕೊಂಬಾಟ್ ನೃತ್ಯದೊಂದಿಗೆ ಸಂಪ್ರದಾಯ ಬದ್ಧವಾಗಿ ಆಚರಿಸುವ ಚೆಟ್ಟಳ್ಳಿ ಚೇರಳ ಶ್ರೀ ಭಗವತಿ ವಾರ್ಷಿಕ ಉತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಪುರಾತನ ಇತಿಹಾಸ ಹೇಳುವ ಪ್ರಕಾರ ನೂರೋಕುಲು ನಾಡಿನಿಂದ ಬಿಟ್ಟ ಬಾಣ ಬಿದ್ದ ಚೇರಳ ಗ್ರಾಮದಲ್ಲಿ ಪಶ್ಚಿಮಾಭಿಮುಖವಾಗಿ ಭಗವತಿ ನೆಲೆಯಾಯಿತು. ಕೊಡವರು, ಅಮ್ಮಕೊಡವರು, ಗೌಡ ಜನಾಂಗ ದವರೆಲ್ಲ ಸೇರಿ ನಡೆಸಿಕೊಂಡು ಬರುತ್ತಿರುವ ದೇವತಾ ಕಾರ್ಯದಲ್ಲಿ ಮಾರ್ಚ್ ೧ ರ ಮಂಗಳವಾರ ಬೆಳಿಗ್ಗೆ ತಕ್ಕ ಮುಖ್ಯಸ್ಥರು, ಊರಿನವರು ದುಡಿಕೊಟ್ಟ್ ಹಾಡಿನೊಂದಿಗೆ ದೇವಾಲಯದ ಮುಂದೆ ಬೊಳಕ್ ಮರ ಇಟ್ಟು ಹಬ್ಬಕಟ್ಟು ಹಾಕಿದರು. ಮಾ.೨ ಮತ್ತು ಮಾ.೩ ರಂದು ಬೆಳಿಗ್ಗೆ ದೇವಾಲಯದಲ್ಲಿ ಕೊಂಬಾಟ್, ಮಾರ್ಚ್ ೪ರಂದು ಪಟ್ಟಣಿ ಹಬ್ಬವಾಗಿದ್ದು, ಅಯ್ಯಪ್ಪ ಬನಕ್ಕೆ ಕಲಾಡ್ಚ ಹೋಗುವುದು. ಕೊಂಗೇಟಿರ ಐನ್‌ಮನೆಯಿಂದ ತಕ್ಕರಾದ ಕೊಂಗೇಟಿರ ಹರೀಶ್ ಅಪ್ಪಣ್ಣ ಅವರನ್ನು ದುಡಿಕೊಟ್ಟ್ ಹಾಡು ಒಡ್ಡೋಲಗದೊಂದಿಗೆ ದೇವಾಲಯಕ್ಕೆ ಕರೆತಂದು ಮನೆಯಿಂದ ದೇವ ಭಂಡಾರವನ್ನು ದೇವತಕ್ಕರಾದ ಚೇರಳ ತಮ್ಮಂಡ ಆನಂದ ಅವರ ಮನೆಯಿಂದ ಊರಿನವರು ದುಡಿಕೊಟ್ ಒಡ್ಡೋಲಗದೊಂದಿಗೆ ದೇವಾಲಯಕ್ಕೆ ಕರೆ ತರಲಾಯಿತು. ಪೂಜಾ ಕೈಂಕರ್ಯ ನಡೆದ ನಂತರ ಕೊಂಬಾಟ್ ನೃತ್ಯ. ತೀರ್ಥ ವಿತರಣೆ ನಡೆದು ದೇವ ಭಂಡಾರವನ್ನು ದೇವತಕ್ಕರ ಮನೆಗೆ ಒಪ್ಪಿಸಿದರು. ಮಾರ್ಚ್ ೫ರಂದು ಅಯ್ಯಪ್ಪ ಬನದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ ತಕ್ಕಮುಖ್ಯಸ್ಥರು ಊರಿನವರ ಸಮ್ಮುಖದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಹಬ್ಬದ ಕಟ್ಟು ಮುರಿದು ನಂತರ ಕೊಂಬಾಟ್ ಪಾಯಸ ಪ್ರಸಾದ ವಿನಿಯೋಗ ನೆರವೇರಿತು.
ಮಾರ್ಚ್೬ ರಂದು ದೊಡ್ಡ ಹಬ್ಬವಾಗಿದ್ದು ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕೊಂಗೇಟಿರ ಐನ್‌ಮನೆಯಿಂದ ಒಡ್ಡೋಲಗದೊಂದಿಗೆ ತಕ್ಕರನ್ನು ಕರೆತಂದು ಊರಿನವರು, ನೆಂಟರಿಷ್ಟರೆಲ್ಲ ಸೇರಿ ಭಂಡಾರ ಮನೆಗೆ ತೆರಳಿ ದೇವತಕ್ಕರ ಸಮ್ಮುಖದಲ್ಲಿ ದೇವ ಭಂಡಾರವನ್ನು ದೇವಾಲಯಕ್ಕೆ ತಂದು ದೇವಿಗೆ ಮಂಗಳಾರತಿ ವಿಶೇಷ ಪೂಜೆ ಸಲ್ಲಿಸಲಾಯಿತು. ಹಿರಿಯರು ಕಿರಿಯರು ತೆಂಗಿನಕಾಯಿ ಎಳೆದರು
ಸಂಜೆ ೬ಕ್ಕೆ ದೇವಾಲಯದ ಮುಂದಿರುವ ಬೊಳಕ್ ಮರವನ್ನು ಇಳಿಸಿ ಶುದ್ಧ ಕಳಸ ಪೂಜೆ ಮಾಡಿ ದೇವ ಭಂಡಾರವನ್ನು ದೇವತಕ್ಕರ ಭಂಡಾರ ಮನೆಗೆ ಒಪ್ಪಿಸಲಾಯಿತು.
-ಕರುಣ್‌ಕಾಳಯ್ಯ