ಮಡಿಕೇರಿ, ಮಾ. ೫: ಬಿಲ್ಲವ ಸಮಾಜ ಸೇವಾ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಬಿಲ್ಲವ ಸಮುದಾಯ ಬಾಂಧವರಿಗಾಗಿ ಏ.೩೦ ಮತ್ತು ಮೇ ೧ ರಂದು ೧೬ನೇ ವರ್ಷದ ಜಿಲ್ಲಾ ಮಟ್ಟದ ಕೋಟಿ ಚೆನ್ನಯ್ಯ ಕ್ರೀಡಾಕೂಟ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಬಿ.ಎಸ್. ಲೀಲಾವತಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.
ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ, ೫೦ ವರ್ಷ ಮೇಲ್ಪಟ್ಟವರಿಗೆ ವೇಗದ ನಡಿಗೆ, ಮಹಿಳೆಯರ ಪ್ರತ್ಯೇಕ ವಿಭಾಗದಲ್ಲಿ ಥ್ರೋಬಾಲ್, ವಿಷ ಚೆಂಡು, ಪುರುಷರ ವಿಭಾಗದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ೫ ವರ್ಷದ ಒಳಗಿನ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ೧ ರಿಂದ ೨ನೇ ತರಗತಿ ಬಾಲಕ, ಬಾಲಕಿಯರಿಗೆ ಕಪ್ಪೆ ಜಿಗಿತ, ೩ ರಿಂದ ೫ನೇ ತರಗತಿ ಬಾಲಕ ಹಾಗೂ ಬಾಲಕಿಯರಿಗೆ ೫೦ ಮೀ. ಓಟ, ೫ನೇ ತರಗತಿಯಿಂದ ೭ನೇ ತರಗತಿ ಬಾಲಕ ಹಾಗೂ ಬಾಲಕಿಯರಿಗೆ ೧೦೦ ಮೀ. ಓಟ, ಪ್ರೌಢಶಾಲಾ ವಿಭಾಗ ಬಾಲಕ ಹಾಗೂ ಬಾಲಕಿಯರಿಗೆ ೨೦೦ ಮೀ. ಓಟ, ಪದವಿ ಪೂರ್ವ ಬಾಲಕ, ಬಾಲಕಿಯರಿಗೆ ೪೦೦ ಮೀ. ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಹೈಸ್ಕೂಲ್, ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒಳಾಂಗಣ ಚೆಸ್ ಮತ್ತು ಕೇರಂ ಏರ್ಪಡಿಸಲಾಗಿದ್ದು, ರೂ.೨೦೦ ಪ್ರವೇಶ ಶುಲ್ಕ ಪಾವತಿಸಿ ಮಾ.೧೯ ರೊಳಗೆ ಹೆಸರು ನೋಂದಾಯಿಸಿ ಕೊಳ್ಳುವಂತೆ ಮನವಿ ಮಾಡಿದರು.
ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ಭಾಗವಹಿಸುವ ಪುರುಷ ತಂಡಗಳು ರೂ.೨,೦೦೦ ವಾಲಿಬಾಲ್ ರೂ.೧,೫೦೦ ಮತ್ತು ಮಹಿಳೆಯರ ಥ್ರೋಬಾಲ್, ಹಗ್ಗಜಗ್ಗಾಟ ತಂಡಗಳಿಗೆ ರೂ. ೧,೦೦೦ ಪಾವತಿಸಿ ಏ.೨೫ ರೊಳಗೆ ಹೆಸರು ನೋಂದಾಯಿಸಿಕೊಳ್ಳುವAತೆ ತಿಳಿಸಿದರು.
ಹೆಚ್ಚಿನ ಮಾಹಿತಿಗೆ ೮೯೭೧೮೪೫೯೬೫, ೯೪೪೮೮೯೬೫೫೬, ೯೦೦೮೫೧೦೫೫೬, ೯೪೮೧೪೩೧೪೪೪, ೯೯೧೬೧೫೫೫೭೦ ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ. ರವೀಂದ್ರ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಎಂ. ಪೂವಪ್ಪ, ಬಿ.ಎನ್. ಕಿಶೋರ್ ಕುಮಾರ್ ಹಾಗೂ ನಿಕಟಪೂರ್ವ ಅಧ್ಯಕ್ಷ ಬಿ.ಎಂ. ರಾಜಶೇಖರ್ ಉಪಸ್ಥಿತರಿದ್ದರು.