ಸೋಮವಾರಪೇಟೆ, ಮಾ.೫: ಇಲ್ಲಿನ ಪಟ್ಟಣ ಪಂಚಾಯಿತಿಗೆ ಒಳಪಟ್ಟ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿರುವ ಕೆಲ ವರ್ತಕರು, ಕಳೆದ ಅನೇಕ ಸಮಯ ದಿಂದ ಬಾಡಿಗೆ ಪಾವತಿಸದೇ ಕಾಲದೂಡುತ್ತಿದ್ದರು. ಇದನ್ನು ಮನಗಂಡ ಪ.ಪಂ. ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಬಾಡಿಗೆ ವಸೂಲಿಗೆ ಇಳಿದ ಪರಿಣಾಮ ಕೆಲವೇ ಗಂಟೆಗಳಲ್ಲಿ ೧೦ಲಕ್ಷಕ್ಕೂ ಅಧಿಕ ಬಾಡಿಗೆ ವಸೂಲಾತಿ ಮಾಡಿದರು.

ಪ.ಪಂ. ಮಳಿಗೆಗಳನ್ನು ಬಾಡಿಗೆ ಪಡೆದಿದ್ದ ಕೆಲವರು ಲಕ್ಷಾಂತರ ರೂಪಾಯಿ ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದ್ದರು. ಅಧಿಕಾರಿಗಳು ಅಂಗಡಿಯ ಬಾಗಿಲಿಗೆ ಅಲೆದರೂ ಹಣ ಪಾವತಿಸಿರಲಿಲ್ಲ. ಈ ಬಗ್ಗೆ ಸಾಮಾನ್ಯ ಸಭೆಯಗಳಲ್ಲೂ ಚರ್ಚೆ ನಡೆದಿತ್ತು.

ಈ ಹಿನ್ನೆಲೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಪಟ್ಟಣದಲ್ಲಿ ಸಂಚರಿಸಿ, ವರ್ತಕರು ಬಾಕಿ ಉಳಿಸಿಕೊಂಡಿದ್ದ ಲಕ್ಷಾಂತರ ರೂಪಾಯಿ ಬಾಡಿಗೆಯನ್ನು ಒಂದೇ ದಿನದಲ್ಲಿ ವಸೂಲಿ ಮಾಡಿದರು. ಪಂಚಾಯಿತಿಯಿAದ ಮಳಿಗೆಗಳನ್ನು ಬಾಡಿಗೆ ಪಡೆದು ಕೊಂಡಿದ್ದ ಕೆಲವು ವರ್ತಕರು ಹಲವು ವರ್ಷಗಳಿಂದ ಕೊರೊನಾ ಮತ್ತು ಇನ್ನಿತರ ಕಾರಣಗಳನ್ನು ನೀಡಿ ಹಣ ನೀಡದೆ ಸತಾಯಿಸುತ್ತಿದ್ದು, ಹಲವು ಬಾರಿ ನೋಟೀಸ್ ನೀಡಿದ್ದರೂ ಗಣನೆಗೆ ತೆಗೆದುಕೊಂಡಿ ರಲಿಲ್ಲ. ಇದರಿಂದ ಪಂಚಾಯಿತಿ ಆದಾಯಕ್ಕೂ ತೊಂದರೆಯಾಗಿತ್ತು.

ಈ ಹಿನ್ನೆಲೆ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಮತ್ತು ಸಿಬ್ಬಂದಿಗಳು ಪೊಲೀಸ್ ಇಲಾಖೆಯ ಸಹಕಾರದಿಂದ ಬಾಡಿಗೆ ವಸೂಲಿ ಮಾಡಲು ಮುಂದಾದರು. ಕೆಲವೇ ಘಂಟೆಗಳ ಅವಧಿಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಬಾಡಿಗೆ ಹಣವನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾದರು.