ಮಡಿಕೇರಿ, ಮಾ. ೫: ಕರ್ನಾಟಕದಲ್ಲಿ ಅಭೂತಪೂರ್ವ ಎನಿಸುವಂತೆ ಇದುವರೆಗೆ ಧಾರ್ಮಿಕ ದತ್ತಿ ಇಲಾಖೆ ನಿಯಂತ್ರಣದಲ್ಲಿದ್ದ ಬಹುತೇಕ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯ, ಪಾರಮಾರ್ಥಿಕ ಉತ್ತುಂಗದ ಸಹಸ್ರಾರು ಭಕ್ತರನ್ನು ಸೆಳೆಯುತ್ತಿರುವ ಮಹಾನ್ ದೇಗುಲಗಳು ಸೇರಿದಂತೆ ಸಹಸ್ರಾರು ದೇಗುಲಗಳು ಇದೀಗ ಸರಕಾರದ ಧಾರ್ಮಿಕ ದತ್ತಿ ಇಲಾಖಾ ಹಿಡಿತದಿಂದ ಮುಕ್ತಗೊಂಡಿವೆ.

ಈ ಹಿಂದೆ ಪಕ್ಷದ ಸಭೆಯೊಂದರಲ್ಲಿ ಮಾತನಾಡುತ್ತಾ, ದೇವಾಲಯ ಗಳನ್ನು ಸ್ವಾಯತ್ತತೆಗೊಳಿಸಬೇಕು. ಸರಕಾರಿ ಹಿಡಿತದಿಂದ ವಿಮುಕ್ತಿಗೊಳಿಸಿ ಭಕ್ತಾದಿಗಳ ನಿಯಂತ್ರಣಕ್ಕೆ ಒಳಪಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದರು.

ಅವರ ಈ ದೂರದರ್ಶಿತ್ವದ ಮಾತು ಅಲ್ಪಾವಧಿಯಲ್ಲಿಯೇ ಕಾರ್ಯಗತ ಗೊಳ್ಳುತ್ತಿರುವುದು ನಿಜಕ್ಕೂ ವಿಶೇಷ ಬೆಳವಣಿಗೆಯಾಗಿದೆ.

(ಮೊದಲ ಪುಟದಿಂದ) ತಾ. ೪ರಂದು ಮಂಡಿಸಿದ ೨೦೨೨ರ ಬಜೆಟ್ ಸಂದರ್ಭ ಮಾತನಾಡುತ್ತಾ, ರಾಜ್ಯದ ಸುಮಾರು ೩,೪೦೦ ದೇಗುಲಗಳನ್ನು ಧಾರ್ಮಿಕ ದತ್ತಿ ಇಲಾಖಾ ಹಿಡಿತದಿಂದ ಮುಕ್ತಗೊಳಿಸಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಘೋಷಿಸಿರುವುದು ಒಂದು ಐತಿಹಾಸಿಕ ತೀರ್ಮಾನ ಎನಿಸಲಿದೆ. ಭಕ್ತಾದಿಗಳ ಆಸಕ್ತಿಗೆ ಹೊಸ ಪರ್ವ ಪ್ರಾರಂಭವಾಗಲಿದೆ.

ಕೊಡಗಿನಲ್ಲಿಯೂ ರಾಜ್ಯದ ಜೀವನಾಡಿ ಎನಿಸಿರುವ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿ - ಭಾಗಮಂಡಲ ಕ್ಷೇತ್ರಗಳೂ ಕೂಡ ಇನ್ನು ಮುಂದೆ ಭಕ್ತಾದಿಗಳ ಬಯಕೆಯ ಆಡಳಿತಕ್ಕೆ ಒಳಪಟ್ಟು ಸರಕಾರಿ ಕಪಿಮುಷ್ಟಿಯಿಂದ ಹೊರಬರಲಿದೆ. ಜಿಲ್ಲೆಯ ಭಕ್ತಾದಿಗಳಲ್ಲಿದ್ದ ಬೇಡಿಕೆ ಈಡೇರಲಿದೆ. ಪ್ರಸಿದ್ಧ ಐತಿಹಾಸಿಕ ದೇಗುಲ ಶ್ರೀ ಓಂಕಾರೇಶ್ವರ, ಪೌರಾಣಿಕ ಹಿನ್ನೆಲೆಯ ಶ್ರೀ ಪಾಡಿ ಇಗ್ಗುತ್ತಪ್ಪ, ಪಾಲೂರು ಮಹಾಲಿಂಗೇಶ್ವರ, ಪಾಲೂರಿನ ಹರಿಶ್ಚಂದ್ರ, ದಕ್ಷಿಣ ಕೊಡಗಿನ ಪುರಾಣ ಪ್ರಸಿದ್ಧ ಇರ್ಪು ಶ್ರೀ ರಾಮೇಶ್ವರ ದೇವಾಲಯಗಳು ಇನ್ನು ಮುಂದೆ ಸ್ವತಂತ್ರ ದೇಗುಲಗಳಾಗಿ ಜಿಲ್ಲೆಯ ಭಕ್ತಾದಿಗಳ ನಿಯಂತ್ರಣದಲ್ಲಿ ನಿರ್ವಹಣೆಗೊಳ್ಳುವ ಸಂದರ್ಭ ಒದಗಿಬಂದಿದೆ. ಈ ಎಲ್ಲಾ ದೇವಾಲಯಗಳ ನಿರ್ವಹಣೆ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೂಡ ಸಾರ್ವಜನಿಕ ಭಕ್ತಾದಿಗಳ ಸಮಿತಿಗಳೇ ನೋಡಿಕೊಳ್ಳುವಂತೆ ಈ ನೂತನ ತೀರ್ಮಾನ ಅವಕಾಶ ಕಲ್ಪಿಸಲಿದೆ.

ಈ ತೀರ್ಮಾನದೊಂದಿಗೆ ರಾಜ್ಯದ ಪುಣ್ಯಕ್ಷೇತ್ರಗಳ ಯಾತ್ರಾರ್ಥಿಗಳಿಗೂ ಕೂಡ ವಿಶೇಷ ಪ್ಯಾಕೇಜ್ ಮತ್ತು ಸಹಾಯಧನವನ್ನು ಮುಖ್ಯಮಂತ್ರಿಯವರು ಮುಂಗಡ ಪತ್ರದಲ್ಲಿ ಘೋಷಿಸಿದ್ದಾರೆ. ಅರ್ಚಕರಿಗೂ ನೆರವು ಕಲ್ಪಿಸಲಾಗಿದೆ.

ರಾಜ್ಯದ ಪ್ರಸಿದ್ಧ ದೇವಾಲಯಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಜೊತೆಗೆ ಆಂಧ್ರದ ತಿರುಪತಿ ಹಾಗೂ ಮಂತ್ರಾಲಯ ಹೀಗೆ ಮೊದಲಾದ ದೇವಾಲಯಗಳಿಗೆ ಪ್ಯಾಕೇಜ್‌ಗಳನ್ನು ಘೋಷಿಸಲಾಗಿದೆ. ವಾರ್ಷಿಕ ಕಾಶೀಯಾತ್ರೆ ಮಾಡುವ ಸಾಮಾನ್ಯ ಜನರಿಗೆ ೩೦,೦೦೦ ಸಂಖ್ಯೆಯ ಪರಿಮಿತಿಯೊಳಗೆ ತಲಾ ರೂ. ೫ ಸಾವಿರ ಸಹಾಯಧನವನ್ನು ಘೋಷಿಸಲಾಗಿದೆ. ಅಲ್ಲದೆ, ಪುಣ್ಯಕ್ಷೇತ್ರಗಳಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಕ್ಕೆ ಸಾರಿಗೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಆಂಧ್ರ ಪ್ರದೇಶದ ಶ್ರೀಶೈಲಕ್ಕೆ ತೆರಳುವ ಕರ್ನಾಟಕದ ಪ್ರವಾಸಿಗರಿಗಾಗಿ ರೂ. ೮೫ ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ಸ್ಥಾಪಿಸಲು ನಿರ್ಧರಿಸಲಾಗಿದೆ. ಮಹಾರಾಷ್ಟçದ ಪಂಡರಾಪುರ ದೇವಾಲಯಕ್ಕೆ ಕರ್ನಾಟಕದಿಂದ ತೆರಳುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಅಲ್ಲಿ ಅತಿಥಿ ಗೃಹವನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ದೇವಾಲಯಗಳ ಅರ್ಚಕರು, ಆಗಮಿಕರು ಮತ್ತು ನೌಕರರಿಗೂ ಕೂಡ ಆರ್ಥಿಕ ನೆರವನ್ನು ನೀಡಲು ನಿರ್ಧರಿಸಲಾಗಿದೆ.