ವೀರಾಜಪೇಟೆ, ಮಾ. ೫: ದಿನಸಿ ವಸ್ತುಗಳನ್ನು ಖರೀದಿಸಿ ಮನೆಗೆ ಹಿಂದಿರುಗುವ ವೇಳೆ ಅಪಘಾತ ಸಂಭವಿಸಿ ಬೈಕ್ ಸವಾರ ದುರ್ಮರಣ ಗೊಂಡ ಘಟನೆ ವೀರಾಜಪೇಟೆ ಐಮಂಗಲ ಗ್ರಾಮ ವಿನಾಯಕ ನಗರ ಸಮೀಪ ತಡರಾತ್ರಿ ನಡೆದಿದೆ.

ವೀರಾಜಪೇಟೆ ತಾಲೂಕು ಅಮ್ಮತ್ತಿ ಕಾವಾಡಿ ಗ್ರಾಮದ ನಿವಾಸಿ ದಿ. ಕೊಳುವಂಡ ಸೋಮಯ್ಯ ಅವರ ಪುತ್ರ ರಾಜ ಪೆಮ್ಮಯ್ಯ (೫೮) ಅಪಘಾತದಲ್ಲಿ ಮರಣಹೊಂದಿದ ವ್ಯಕ್ತಿ.

ಮೃತ ರಾಜ ಅವರು ಕಾವಾಡಿ ಸ್ವಗೃಹದಿಂದ ತನ್ನ ಸ್ಲೆಂಡರ್ ಬೈಕ್‌ನಲ್ಲಿ (ಕೆಎ-೧೨ಇ-೮೭೯೧) ರಲ್ಲಿ ದಿನಸಿ ತರಲೆಂದು ನಗರಕ್ಕೆ ಆಗಮಿಸಿದ್ದಾರೆ. ದಿನಸಿ ವಸ್ತುಗಳನ್ನು ಖರೀದಿಸಿ ಮನೆಗೆ ಹಿಂದಿರುಗುವ ವೇಳೆ ರಾತ್ರಿ ೦೭-೩೦ ರ ಸಮಯದಲ್ಲಿ ವೀರಾಜಪೇಟೆ - ಸಿದ್ದಾಪುರ ಮುಖ್ಯರಸ್ತೆ ಐಮಂಗಲ ಗ್ರಾಮದ ವಿನಾಯಕ ನಗರದ ಸಮೀಪ ಅಮ್ಮತ್ತಿಯಿಂದ ನಗರಕ್ಕೆ ಆಗಮಿಸುತಿದ್ದ ಬಜಾಜ್ ಆಟೋ (ಕೆಎ-೧೨ಬಿ-೪೩೦೩) ಬೈಕ್‌ಗೆ ಅಪ್ಪಳಿಸಿದೆ. ಬೈಕ್ ಸವಾರನ ತಲೆ ಭಾಗಕ್ಕೆ ಮಾರಣಾಂತಿಕ ಗಾಯಗಳಾಗಿವೆ. ಆಟೋ ಚಾಲಕ ಟಿ.ಟಿ. ರಾಜನ್ ಎಂಬವರಿಗೆ ತಲೆಭಾಗ ಮತ್ತು ಶರೀರದ ಇತರ ಭಾಗಗಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಮಾರ್ಗ ಮಧ್ಯೆ ಬೈಕ್ ಸವಾರನ ಪ್ರಾಣ ಪಕ್ಷಿ ಹಾರಿಹೋಗಿದೆ. ಗಾಯಾಳು ಆಟೋ ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಮೃತರಾದ ರಾಜ ಪೆಮ್ಮಯ್ಯ ಅವರ ತಮ್ಮ ಸುರೇಶ್ ಅವರು ನೀಡಿರುವ ದೂರಿನ ಅನ್ವಯ ವೀರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ಅಟೋ ಚಾಲಕ ಟಿ.ಟಿ.ರಾಜನ್ ಮೇಲೆ ಪ್ರಕರಣ ದಾಖಲಿಸಲಾಗಿದೆ.

-ಕಿಶೋರ್ ಕುಮಾರ್ ಶೆಟ್ಟಿ.