ಮಡಿಕೇರಿ, ಮಾ. ೫: ಮಡಿಕೇರಿ ನಗರದಲ್ಲಿ ಸಂಚಾರಿ ವ್ಯವಸ್ಥೆಯನ್ನು ಇನ್ನೂ ಶಿಸ್ತುಬದ್ಧವಾಗಿ ಮಾಡಲು ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರು ಇಂದು ವಿವಿಧ ಸಂಘ-ಸAಸ್ಥೆಗಳ ಜೊತೆ ಚರ್ಚಿಸಿದರು.

ಪೊಲೀಸ್ ಇಲಾಖಾ ಸಭಾಂಗಣದಲ್ಲಿ ನಡೆದ ಸಮಾ ಲೋಚನಾ ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಪಾಲ್ಗೊಂಡು ಮಾತನಾಡಿ, ನಗರದ ವಿವಿಧೆಡೆ ಉತ್ತಮ ಪಾರ್ಕಿಂಗ್ ವ್ಯವಸ್ಥೆಗಾಗಿ ಟೆಂಡರ್ ಆಹ್ವಾನಿಸಿದ್ದು, ಸೂಕ್ತ ದರ ಲಭ್ಯವಾಗದ ಹಿನ್ನೆಲೆ ಅದನ್ನು ಮುಂದೂಡಬೇಕಾಯಿತು ಎಂದರು. ಹೊಸ ವ್ಯವಸ್ಥೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ನೋಟಿಫಿಕೇಶನ್ ಅಗತ್ಯತೆ ಇದ್ದು, ಈ ಬಗ್ಗೆಯೂ ಗಮನ ಹರಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಚೇಂಬರ್ ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್ ಅವರು ಮಾತನಾಡಿ, ಈ ಹಿಂದೆ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸಿ ಇದೀಗ ಕೆಟ್ಟು ನಿಂತಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು. ಹಿಂದೆ ಪಾರ್ಕಿಂಗ್‌ಗೆ ಗುರುತಿಸಿದ್ದ ಸಿ.ಪಿ.ಸಿ. ಜಾಗದಲ್ಲಿ ವ್ಯವಸ್ಥೆ, ನಗರದ ವಿವಿಧ ರಸ್ತೆಗಳಲ್ಲಿ ಶಾಶ್ವತವಾಗಿ ನಿಲ್ಲಿಸಿರುವ ವಾಹನಗಳ ತೆರವು, ನೂತನ ಕಟ್ಟಡ ನಿರ್ಮಾಣದ ಸಂದರ್ಭ ಪಾರ್ಕಿಂಗ್ ಜಾಗ ಮೀಸಲು ಬಗ್ಗೆ ನಗರಸಭೆಯ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಅವರು ಜಿಲ್ಲಾ ಎಸ್.ಪಿ. ಹಾಗೂ ನಗರಸಭಾಧ್ಯಕ್ಷರ ಗಮನ ಸೆಳೆದರು. ನಗರಸಭಾ ಸದಸ್ಯ ಉಮೇಶ್ ಸುಬ್ರಮಣಿ ಅವರು, ವರ್ತಕರು ತಮ್ಮ ಖಾಸಗಿ ವಾಹನಗಳನ್ನು ಅಂಗಡಿಗಳ ಮುಂದೆ ಬೆಳಗ್ಗಿನಿಂದ ಸಂಜೆವರೆಗೆ ನಿಲ್ಲಿಸುತ್ತಿರುವುದರಿಂದ ಇತರರಿಗೆ ಪಾರ್ಕಿಂಗ್ ಜಾಗ ಸಿಗುತ್ತಿಲ್ಲ; ಈ ಬಗ್ಗೆ ಚೇಂಬರ್ ಗಮನ ಹರಿಸಬೇಕು ಎಂದರು.

ನಗರಸಭಾ ಸದಸ್ಯ ಅರುಣ್ ಶೆಟ್ಟಿ ಅವರು, ಗುಜರಿ ಅಂಗಡಿಗಳು ಕೆಲವೆಡೆ ರಸ್ತೆಯನ್ನೇ ಅತಿಕ್ರಮಿಸಿಕೊಂಡಿದ್ದು, ತೆರವು ಆಗಬೇಕು ಎಂದರು. ನಗರದಲ್ಲಿ ಹಲವು ಕಡೆ ಬೈಕ್‌ಗಳು ಶಬ್ಧ

ಮಾಲಿನ್ಯ ಮಾಡಿ

(ಮೊದಲ ಪುಟದಿಂದ) ಓಡಿಸುತ್ತಿರುವ ಬಗ್ಗೆ ಗಮನ ಸೆಳೆದರು. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು, ಈ ಹಿಂದೆ ರಾಜಾಸೀಟು ಸೇರಿದಂತೆ ವಿವಿಧೆಡೆ ಪ್ರವಾಸಿಗಳು ಪ್ಲಾಸ್ಟಿಕ್ ಬಳಸಿದರೆ ಹಾಗೂ ಧೂಮಪಾನ ಸೇವನೆ ಮಾಡಿದರೆ ಪೊಲೀಸರು ದಂಡ ವಿಧಿಸುತ್ತಿದ್ದು, ಮತ್ತೆ ಆರಂಭಿಸುವAತೆ ಒತ್ತಾಯಿಸಿದರು. ರಾಜಾಸೀಟು ಬಳಿ ಇದ್ದ ಪೊಲೀಸ್ ಮಾಹಿತಿ ಕೇಂದ್ರವನ್ನು ಮತ್ತೆ ತೆರೆಯುವಂತೆ ಒತ್ತಾಯಿಸಿದರು.

ನಗರಸಭಾ ಸದಸ್ಯ ಮಹೇಶ್ ಜೈನಿ ಅವರು, ಚೌಕಿ ಬಳಿ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡಲಾಗುತ್ತಿದೆ ಎಂದು ಹೇಳಿದರು. ನಗರಸಭಾ ಸದಸ್ಯೆ ಶ್ವೇತಾ ಪ್ರಶಾಂತ್ ಅವರು ಮಾತನಾಡಿ, ರಾಜಾಸೀಟಿನಿಂದ ಖಾಸಗಿ ಬಸ್ ನಿಲ್ದಾಣಕ್ಕೆ ಬರುವ ರಸ್ತೆಯಲ್ಲಿ ಅಲ್ಲಲ್ಲೇ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದರೂ, ಕೆಲವರು ರಾತ್ರಿ ಸಮಯದಲ್ಲಿ ಅವುಗಳನ್ನು ಅಲ್ಲಿಂದ ತೆರವುಗೊಳಿಸುತ್ತಿದ್ದು, ಪೊಲೀಸರು ಗಮನಹರಿಸಬೇಕೆಂದರು.

ಜಿಲ್ಲಾ ಚೇಂಬರ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಅವರು, ಫುಟ್‌ಪಾತ್‌ಗಳಲ್ಲಿ ವ್ಯಾಪಾರ ನಡೆಸಲಾಗುತ್ತಿದ್ದು, ಪಾದಚಾರಿಗಳಿಗೆ ತೊಂದರೆ ಆಗುತ್ತಿದೆ ಎಂದರು. ಅಲ್ಲದೆ ಹೋಂಸ್ಟೇಗಳಿಗೆ ಬ್ರೋಕರ್‌ಗಳ ಹಾವಳಿ ಜಾಸ್ತಿಯಾಗುತ್ತಿದೆ ಎಂದರು ವಿವರಿಸಿದರು. ಇದಕ್ಕೆ ದನಿಗೂಡಿಸಿದ ಚೇಂಬರ್ ಉಪಾಧ್ಯಕ್ಷೆ ಮೋಂತಿ ಗಣೇಶ್, ಬ್ರೋಕರ್‌ಗಳ ಹಾವಳಿ ತಡೆಗಟ್ಟುವುದು ಹಾಗೂ ನೋಂದಾವಣೆ ಮಾಡದ ಹೋಂಸ್ಟೇಗಳ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದರ ಅಗತ್ಯತೆ ಬಗ್ಗೆ ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಕೆ.ಎಂ. ಕರುಂಬಯ್ಯ ಕೂಡ ಒತ್ತಿ ಹೇಳಿದರು.

ಜಿಲ್ಲಾ ಹೊಟೇಲ್, ರೆಸ್ಟೋರೆಂಟ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅವರು ವರ್ಷದ ೬ ತಿಂಗಳು ಪ್ರವಾಸಿಗರ ಆಗಮನದಿಂದ ಮಡಿಕೇರಿಯಲ್ಲಿ ಸಂಚಾರಿ ದಟ್ಟಣೆ ಹೆಚ್ಚು ಇರಲಿದ್ದು, ಶಿಸ್ತುಬದ್ಧ ಪಾರ್ಕಿಂಗ್ ವ್ಯವಸ್ಥೆ ಅಗತ್ಯವಿದೆ; ಬಹುಮಹಡಿ ವಾಹನ ಪಾರ್ಕಿಂಗ್ ವ್ಯವಸ್ಥೆ ೧೫ ವರ್ಷಗಳಿಂದ ಚರ್ಚೆಯಲ್ಲಿದ್ದು, ಕಾರ್ಯರೂಪಕ್ಕೆ ತರಬೇಕು ಎಂದರು.

ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿ ವಸಂತ ಮಾತನಾಡಿ, ಜೀವನೋಪಾಯಕ್ಕಾಗಿ ವ್ಯಾಪಾರ ಮಾಡುತ್ತಿರುವ ಸಂಘದ ಸದಸ್ಯರಿಗೆ ಪರ್ಯಾಯ ಜಾಗ ಕೊಟ್ಟಲ್ಲಿ ಸ್ಥಳಾಂತರಕ್ಕೆ ಅಭ್ಯಂತರವಿಲ್ಲವೆAದರು. ಈ ಬಗ್ಗೆ ವಿವರಣೆ ನೀಡಿದ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಖಾಸಗಿ ಬಸ್ ನಿಲ್ದಾಣದಲ್ಲಿ ಜಾಗ ಗುರುತಿಸಲಾಗಿದ್ದು, ಸದ್ಯದಲ್ಲೇ ಇಲ್ಲಿಗೆ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗುವುದು ಎಂದರು.

ನಗರಸಭಾ ಸದಸ್ಯ ಮನ್ಸೂರ್ ಆಲಿ ಅವರು, ನಗರದಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲವು ಆಟೋರಿಕ್ಷಾಗಳ ಮೂಲಕ ಮಾರಾಟ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ಮುಂದಿನ ಪೀಳಿಗೆಯ ಬದುಕು ದುಸ್ತರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪಾರ್ಕಿಂಗ್‌ಗೆ ಮೀಸಲಿಟ್ಟ ೧೪ ಸೆಂಟ್ ಜಾಗ ಅತಿಕ್ರಮಣವಾಗಿದ್ದು, ತೆರವುಗೊಳಿಸಬೇಕೆಂದರು.

ನಗರಸಭಾ ಸದಸ್ಯ ಅಪ್ಪಣ್ಣ ಅವರು, ಜಿಲ್ಲೆಯ ವಿವಿಧೆಡೆ ಅಪರಿಚಿತ ವ್ಯಕ್ತಿಗಳು ಕಬ್ಬು ಹಾಲನ್ನು ಮಾರುತ್ತಿದ್ದು, ಇವರುಗಳ ಪೂರ್ಣ ವಿವರವನ್ನು ಪೊಲೀಸ್ ಇಲಾಖೆ ಪಡೆಯಬೇಕು ಎಂದು ಸಲಹೆ ನೀಡಿದರು. ನಗರಸಭಾ ಸದಸ್ಯ ಬಶೀರ್ ಅಹಮ್ಮದ್ ಅವರು, ಗಣಪತಿ ಬೀದಿಯಲ್ಲಿ ಚೌಕಿ ಬಳಿ ಚರಂಡಿ ಕಾಮಗಾರಿಗೆ ಸಿಗ್ನಲ್ ದೀಪದ ಕಂಬ ಅಡ್ಡವಾಗಿದ್ದು, ಪೊಲೀಸ್ ಇಲಾಖೆ ಇದನ್ನು ತೆರವುಗೊಳಿಸಬೇಕೆಂದರು.

ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಹೆಚ್.ಎಸ್. ದಿವಾಕರ್ ಅವರು ಜಿಲ್ಲೆಯಲ್ಲಿ ಪ್ರವಾಸೋದ್ಯಮದಿಂದ ಆರ್ಥಿಕ ಚೇತರಿಕೆ ಕಂಡುಬAದಿದ್ದು, ಪ್ರವಾಸಿಗರನ್ನು ಅತಿಥಿಗಳಂತೆ ಕಾಣುವ ಪರಿಸ್ಥಿತಿ ನಿರ್ಮಾಣವಾಗಬೇಕೆಂದರು.

ಜನರ ಸಲಹೆ-ಸೂಚನೆಗಳಿಗೆ ಉತ್ತರಿಸಿದ ಎಸ್.ಪಿ., ಎಂ.ಎ. ಅಯ್ಯಪ್ಪ ಅವರು ನಗರದ ವಿವಿಧೆಡೆ ಸಿಗ್ನಲ್ ಲೈಟ್‌ಗಳನ್ನು ಅವಳಡಿಸಲು ತಾವು ಡಿ.ಜಿ.ಪಿ. ಅವರಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು. ಪಾರ್ಕಿಂಗ್ ಮತ್ತು ಏಕಮುಖ ಸಂಚಾರಗಳ ಬಗ್ಗೆ ಅಲ್ಲಲ್ಲೇ ನಾಮಫಲಕಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗು ವುದು ಎಂದರು. ಅಕ್ರಮ ಗಾಂಜಾ ಬಳಕೆ ಬಗ್ಗೆ ಸಾರ್ವಜನಿಕರು ನಿರ್ಭೀತಿಯಿಂದ ತಮ್ಮ ಗಮನಕ್ಕೆ ತರುವಂತೆ ಹೇಳಿದ ಅಯ್ಯಪ್ಪ ಅವರು, ನಗರದಲ್ಲಿ ಸೂಕ್ತ ಸಿಸಿ ಟಿವಿ ವ್ಯವಸ್ಥೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬೀದಿ ವ್ಯಾಪಾರಿಗಳನ್ನು ತೆರವು ಮಾಡುವುದಕ್ಕೆ ಮುನ್ನ ಮಾನವೀಯ ಅಂಶಗಳನ್ನು ಪರಿಗಣಿಸಬೇಕಿದೆ ಎಂದ ಅವರು, ಅದೇ ರೀತಿ ಆರ್ಥಿಕ ಭದ್ರತೆಗಾಗಿ ಹಲವು ಮಂದಿ ಹೋಂಸ್ಟೇಗಳನ್ನು ಮಾಡಿಕೊಂಡಿದ್ದು, ಅವುಗಳು ನೋಂದಣಿ ಮಾಡಿಕೊಳ್ಳುವಂತೆ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿವರಿಸಿದರು. ಪೊಲೀಸ್ ವ್ಯವಸ್ಥೆಗೆ ಜನರು ಕೈಜೋಡಿಸುವಂತೆ ಅವರು ಮನವಿ ಮಾಡಿದರು.

ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ಸಿ.ಐ.ಗಳಾದ ವೆಂಕಟೇಶ್, ಮೇದಪ್ಪ, ಸಂಚಾರಿ ಎಸ್.ಐ. ಅಂತಿಮ ಹಾಗೂ ಇತರರು ಪಾಲ್ಗೊಂಡಿದ್ದರು.