ಶನಿವಾರಸಂತೆ, ಮಾ. ೩: ಶನಿವಾರಸಂತೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಸರೋಜ ಶೇಖರ್ ವಹಿಸಿದ್ದರು.

ಪಂಚಾಯಿತಿ ಸದಸ್ಯ ಸರ್ದಾರ್ ಅಹಮದ್ ಮಾತನಾಡಿ, ಇದುವರೆಗೆ ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಮಾತ್ರ ನಡೆಯುತ್ತಿದ್ದ ಪ್ರಗತಿ ಪರಿಶೀಲನಾ ಸಮಿತಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನೆಯು ಇನ್ನು ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯಲಿದೆ ಎಂದರು.

ಕAದಾಯ ಇಲಾಖೆಯವರು ಇಲಾಖೆಯ ಮಾಹಿತಿ ನೀಡಿದರು. ಇಲಾಖೆಯ ಕೆಲ ಸೌಲಭ್ಯಗಳಿಗೆ ಈಗಲೂ ಕಂದಾಯ ಕಚೇರಿಗೆ ಫಲಾನುಭವಿಗಳು ನಿರಂತರ ಅಲೆದಾಡುತ್ತಿದ್ದರೂ ಕಂದಾಯ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಸಹಾಯಕರು, ವೃದ್ಧರನ್ನು ವರ್ಷಾನುಘಟ್ಟಲೆ ಕಚೇರಿಗೆ ತಿರುಗಿಸುತ್ತಿದ್ದೀರಾ, ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲವೆಂದು ಸದಸ್ಯ ಸರ್ದಾರ್ ಆಕ್ಷೇಪಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೧೭ಕ್ಕೆ ೯೪ ಸಿ ಅರ್ಜಿಗಳನ್ನು ತೆಗೆದುಕೊಂಡು ಇದುವರೆಗೂ ಬಡವರಿಗೆ ಹಕ್ಕುಪತ್ರ ಗಳನ್ನು ವಿತರಿಸದ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ರಘು ಅವರು ಕೆಲವರಿಗೆ ಒಂದೇ ಆಸ್ತಿಗೆ ಹಕ್ಕುಪತ್ರ, ಪ್ರಾಪರ್ಟಿ ಕಾರ್ಡು ಇದೆ. ಆರ್‌ಟಿಸಿನೂ ಇದೆ. ಪ್ರಾಪರ್ಟಿ ಕಾರ್ಡ್ ಇರುವುದರಿಂದ ಆರ್‌ಟಿಸಿ ತೆಗೆದು ಹಾಕುವಂತೆ ಅಧಿಕಾರಿಗಳಿಗೆ ತಿಳಿಸಿದರು. ೯೪ ಸಿ ಅಡಿಯಲ್ಲಿ ಫಲಾನುಭವಿಗಳಿಗೆ ಕೂಡಲೇ ಹಕ್ಕುಪತ್ರ ವಿತರಿಸಬೇಕೆಂದರು. ಇಲ್ಲದಿದ್ದರೆ ಸದ್ಯದಲ್ಲೇ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದರು. ಕಂದಾಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಧ್ಯಕ್ಷೆ ಸರೋಜ ಶೇಖರ್, ಸದಸ್ಯೆ ಗೀತಾ ಹರೀಶ್ ಆಕ್ಷೇಪ ವ್ಯಕ್ತಪಡಿಸಿದರು.

ವಿದ್ಯುತ್ ಇಲಾಖೆಯ ಇಂಜಿನಿಯರ್ ಹೇಮಂತ್ ಕುಮಾರ ಇಲಾಖೆಯ ಪ್ರಗತಿ ಕಾರ್ಯ ವೈಖರಿಯ ಬಗ್ಗೆ ವಿವರಣೆ ನೀಡಿದರು. ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಸಲೀಮ್ ಅವರು, ಇಲಾಖೆಯ ಬಗ್ಗೆ ಮಾಹಿತಿ ನೀಡಿದರು. ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲಜೀವನ್ ಮಿಷನ್ ಬಗ್ಗೆ ವಿವರಣೆ ನೀಡಿದರು. ಶನಿವಾರಸಂತೆಗೆ ಅಧಿಕ ನೀರಿನ ಅಗತ್ಯವಿದೆ ಎಂದು ಸದಸ್ಯ ಶರತ್ ಶೇಖರ್ ಸಲಹೆ ನೀಡಿದರು.

ಉಪಾಧ್ಯಕ್ಷ ಎಸ್.ಆರ್. ಮಧು ಮಾತನಾಡಿ, ತ್ಯಾಗರಾಜ ಕಾಲೋನಿ ಶಾಲೆ ಆವರಣದಲ್ಲಿ ಕೆಲವು ಕಿಡಿಗೇಡಿಗಳು ಕುಡಿದು ಬಾಟಲಿ ಗಳನ್ನು ಹೊಡೆದು ಹಾಕುತ್ತಾರೆ. ಸ್ವಲ್ಪ ಗಮನ ಹರಿಸಿ ಎಂದು ಎಎಸ್‌ಐ ಶಶಿಧರ್ ಅವರನ್ನು ಕುರಿತು ಹೇಳಿದರು.

ನೋಡಲ್ ಅಧಿಕಾರಿ ಕೃಷಿ ಇಲಾಖೆಯ ಸಿಂಧು ಇಲಾಖೆಯ ಕಾರ್ಯಕ್ರಮಗಳು, ಪ್ರಯೋಜನ ಗಳನ್ನು ಸಭೆಗೆ ತಿಳಿಸಿದರು.

ಶನಿವಾರಸಂತೆ ಸಮುದಾಯ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಹಲವಾರು ಸಮಸ್ಯೆಗಳಿದ್ದು, ಅದರ ಬಗ್ಗೆ ಚರ್ಚಿಸಲು ಯಾರೊಬ್ಬರು ಸಭೆಗೆ ಹಾಜರಾಗದ ಇಲಾಖೆಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಕಳುಹಿಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರುಗಳಾದ ಫರ್ಜಾನ ಶಾಹಿದ್, ಸರಸ್ವತಿ, ಕಾವೇರಿ, ಸರ್ದಾರ್, ಶರತ್‌ಶೇಖರ್, ಆದಿತ್ಯಗೌಡ, ಎಸ್.ಎನ್. ರಘು, ಗೀತಾ ಹರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯಾಚಾರ್, ವಿವಿಧ ಇಲಾಖೆಯ ಪ್ರತಿನಿಧಿಗಳು, ಲೆಕ್ಕ ಸಹಾಯಕ ವಸಂತ್, ಪೌರ ಕಾರ್ಮಿಕ ಧರ್ಮರಾಜ್ ಇತರರು ಉಪಸ್ಥಿತರಿದ್ದರು.