ಮಡಿಕೇರಿ, ಮಾ.೩ : ಆರ್ಥಿಕ ಸಂಕಷ್ಟದ ಪರಿಸ್ಥಿತಿಯ ನಡುವೆಯೂ ಸಚಿವರು ಹಾಗೂ ಶಾಸಕರ ವೇತನ ಹೆಚ್ಚಳ ಮಾಡಿರುವುದು ಸರಿಯಾದ ಕ್ರಮವಲ್ಲವೆಂದು ಟೀಕಿಸಿರುವ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ವೇತನ ಹೆಚ್ಚಳಕ್ಕೂ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಹಾಗೂ ಮಡಿಕೇರಿ ನಗರಾಧ್ಯಕ್ಷ ಕೆ.ಜಿ.ಪೀಟರ್ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡದ ಸರ್ಕಾರ ಸಚಿವರು ಹಾಗೂ ಶಾಸಕರ ವೇತನವನ್ನು ಶೇ.೫೦ ರಿಂದ ೬೦ ರವರೆಗೆ ಏರಿಕೆ ಮಾಡಿದೆ. ಇದೇ ರೀತಿ ಗ್ರಾ.ಪಂ, ತಾ.ಪಂ, ಪ.ಪಂ, ಜಿ.ಪಂ, ಪುರಸಭೆ ಹಾಗೂ ನಗರಸಭೆಯ ಜನಪ್ರತಿನಿಧಿಗಳಿಗೂ ವೇತನ ಹೆಚ್ಚಳ ಮಾಡಲಿ ಎಂದು ಆಗ್ರಹಿಸಿದ್ದಾರೆ.

ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಜನರ ಆದಾಯ ಕುಸಿಯುತ್ತಲೇ ಇದ್ದು, ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಉಂಟಾಗುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸರ್ಕಾರ ಸಚಿವರು ಹಾಗೂ ಶಾಸಕರ ವೇತನ ಹೆಚ್ಚಿಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿ ಬಡವರ ಬದುಕು ಸುಗಮ ಮಾಡುವ ಬದಲು ತಮ್ಮ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ತಳಮಟ್ಟದಿಂದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿವುದರಿಂದ ಇವರ ವೇತನವನ್ನು ಕೂಡ ಹೆಚ್ಚಳ ಮಾಡಬೇಕು ಎಂದು ಉಸ್ಮಾನ್ ಹಾಗೂ ಪೀಟರ್ ಒತ್ತಾಯಿಸಿದ್ದಾರೆ.