ಕೂಡಿಗೆ, ಮಾ.೩: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೊಡಗು ಜಿಲ್ಲಾ ಪಂಚಾಯತ್, ಇವರ ಸಹಯೋಗದೊಂದಿಗೆ, ಪ್ರಧಾನ ಮಂತ್ರಿ ವನಧನ ವಿಕಾಸ ಕೇಂದ್ರಗಳ ಕುರಿತಾದ ರಚನೆ ಮತ್ತು ಮೌಲ್ಯ ಸರಪಣಿ, ಮೌಲ್ಯ ವರ್ಧನೆ, ಮಾರುಕಟ್ಟೆ ಸಂಪರ್ಕ ಕುರಿತಂತೆ ರಾಜ್ಯ ಮಟ್ಟದ ತರಬೇತಿ ಕಾರ್ಯಗಾರವು ಕೂಡಿಗೆಯ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ನೆರವೇರಿಸಿದರು. ಸಂಜೀವಿನಿ ಕೆಎಸ್‌ಆರ್‌ಎಲ್‌ಪಿಎಸ್ ಸಂಸ್ಥೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಟೈಫೆಡ್ ಸಹಯೋಗದೊಂದಿಗೆ ರಾಜ್ಯದ ವಿ,ಡಿ ವಿ ಕೆ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಸರ್ಕಾರದ ಅನುಮೋದನೆಯೊಂದಿಗೆ ಗುರಿಯನ್ನು ನಿಗದಿಪಡಿಸಲಾಗಿರುತ್ತದೆ. ಈ ಸಂಬAಧ ಆಯಾ ಜಿಲ್ಲೆಯಲ್ಲಿ ಕ್ಷೇತ್ರ ಮಟ್ಟದಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಾಗೂ ಸಂಸ್ಥೆಯ ಸಿಬ್ಬಂದಿಗಳ ಸಾಮರ್ಥ್ಯ ಬಲವರ್ಧನೆಗಾಗಿ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ತರಬೇತಿಯನ್ನು ಪಡೆದವರು ಗ್ರಾಮೀಣ ಮಟ್ಟದಲ್ಲಿ ಸ್ವ ಸಹಾಯ ಗುಂಪಿನವರು ಆರ್ಥಿಕವಾಗಿ ಮುಂದುವರಿಯಲು ಮತ್ತು ಹಾಡಿಯ ಜನರಿಗೆ ಕಾಡಿನ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಮಾಡಲು ಸಮಗ್ರವಾದ ತರಬೇತಿಯನ್ನು ನೀಡಬೇಕು ಎಂದು ಅವರು ಕಾರ್ಯಾಗಾರಕ್ಕೆ ಆಗಮಿಸಿದ ರಾಜ್ಯಮಟ್ಟದ ಜಿಲ್ಲಾವಾರು ಪ್ರತಿನಿಧಿಗಳಿಗೆ ಮಾಹಿತಿಯನ್ನು ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಶ್ರೀಕಂಠಮೂರ್ತಿ ಮಾತನಾಡಿ, ವನಧನ ವಿಕಾಸ ಯೋಜನೆಯು ರಾಜ್ಯ ಮಟ್ಟದ ಹೊಸ ಯೋಜನೆ ಆಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿರುವ ಮಹಿಳಾ ಸ್ವ ಸಹಾಯ ಗುಂಪುಗಳ ಬಲವರ್ಧನೆಗಾಗಿ ಕೃಷಿ ಮತ್ತು ಕೃಷಿಯೇತರ, ತೋಟಗಾರಿಕೆಯ ಉತ್ಪನ್ನಗಳ ಮಾರಾಟದಿಂದ ಸಫಲತೆಯನ್ನು ಪಡೆಯಲು ಬೇಕಾಗುವ ಪ್ರಾಥಮಿಕ ಹಂತದ ಮಾಹಿತಿ ಮತ್ತು ಗ್ರಾಮೀಣ ಮಟ್ಟದಲ್ಲಿ ಆರ್ಥಿಕ ಚಟುವಟಿಕೆ ಉತ್ತಮ ರೀತಿಯಲ್ಲಿ ಸಾಗಲು ಬೇಕಾಗುವ ಎಲ್ಲಾ ವಿಧದ ತರಬೇತಿಯನ್ನು ಈ ಕಾರ್ಯಾಗಾರ ದಲ್ಲಿ ನೀಡಲಾಗುವುದು. ಶಿಬಿರಾರ್ಥಿಗಳು ನಿರಂತರ ಕಲಿಕೆಯ ಮೂಲಕ ತರಬೇತಿ ಪಡೆದು ಗ್ರಾಮಮಟ್ಟದ ಸ್ವ ಸಹಾಯ ಮಹಿಳಾ ಸಂಘದ ಬೆಳವಣಿಗೆಗೆ ಸಹಕಾರಿ ಗಳಾಗಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿದ್ದ ಜಿಲ್ಲಾ ಐಟಿಡಿಪಿ ಅಧಿಕಾರಿ ಹೊನ್ನೆ ಗೌಡ ಮಾತಾಡುತ್ತಾ, ಹಾಡಿಗಳ ಮತ್ತು ಗಿರಿಜನರು ಸಂಗ್ರಹ ಮಾಡುವ ಕಾಡಿನ ಉತ್ಪನ್ನಗಳ ಮಾರಾಟಕ್ಕೆ ಬೇಕಾಗುವ ವ್ಯವಸ್ಥೆಯನ್ನು ಮದ್ಯವರ್ತಿಗಳಿಂದ ತಪ್ಪಿಸಿ ನೇರ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಮಾಹಿತಿಯ ಆಯಾ ಜಿಲ್ಲಾ ಹಾಡಿ ಜನಾಂಗದವರಿಗೆ ತಿಳಿಸಬೇಕು ಎಂದರು.

ವೇದಿಕೆಯಲ್ಲಿ ಕೂಡಿಗೆ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಕುಮಾರ್ ಮಾತನಾಡಿದರು.

ತರಬೇತಿಯಲ್ಲಿ ಸಂಪನ್ಮೂಲಗಳ ಪರಿಚಯ, ಸಂಪನ್ಮೂಲ ಮೌಲ್ಯ ಸರಪಳಿ ಮೂಲ ಗುರುತಿಸುವಿಕೆ, ಸಂಪನ್ಮೂಲ ಕ್ರೋಢೀಕರಣ ಇವುಗಳ ಬಗ್ಗೆ ಬೆಂಗಳೂರಿನ ಅಂತರ್ ವಿಷಯಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆರ್. ಜಗನ್ನಾಥ ಸಂಪನ್ಮೂಲ ವ್ಯಕ್ತಿ ಸಮಗ್ರವಾದ ಮಾಹಿತಿಯನ್ನು ನೀಡಿದರು. ಅದರಂತೆ ಯೋಜನೆ ಉದ್ದೇಶ ಮತ್ತು ವನಧನದ ಸಂಪೂರ್ಣ ಮಾಹಿತಿಯನ್ನು ಹಿರಿಯ ಅಧಿಕಾರಿ ಗಗನ್ ಪ್ರಕಾಶ್ ಮತ್ತು ಪ್ರಾಧ್ಯಾಪಕಿ ದೀಪಾ ನೀಡಿದರು. ಇಲಾಖೆಯ ಜಗದೀಶ್ ಸ್ವಾಗತಿಸಿ ವಂದಿಸಿದರು.

-ಕೆ.ಕೆ. ನಾಗರಾಜಶೆಟ್ಟಿ.