ಪೊನ್ನಂಪೇಟೆ, ಮಾ. ೨: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೧-೨೨ ನೇ ಹಣಕಾಸು ವರ್ಷದ ಮತ್ತು ಹಿಂದಿನ ಸಾಲಿನ ಕಟ್ಟಡ-ನಿವೇಶನ ಕಂದಾಯ, ಕುಡಿಯುವ ನೀರಿನ ತೆರಿಗೆ ಮತ್ತು ಇತರೆ ಶುಲ್ಕಗಳ ವಸೂಲಾತಿ ಸಲುವಾಗಿ ಗ್ರಾಮ ಪಂಚಾಯಿತಿಯಿAದ ತೆರಿಗೆ ಸಂಗ್ರಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ಕಂದಾಯ ಪಾವತಿಸಲು ಬಾಕಿ ಉಳಿಸಿಕೊಂಡಿರುವ ಸಾರ್ವಜನಿಕರು ಕಡ್ಡಾಯವಾಗಿ ಪಾವತಿಸಿ ಗ್ರಾಮದ ಅಭಿವೃದ್ಧಿಗಾಗಿ ಸಹಕರಿಸಲು ಗ್ರಾಮ ಪಂಚಾಯಿತಿ ಪ್ರಕಟಣೆಯಲ್ಲಿ ಕೋರಲಾಗಿದೆ. ಪಾವತಿದಾರರು ನಗದು, ಚೆಕ್ ಅಥವಾ ಆನ್‌ಲೈನ್ ಮುಖಾಂತರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಥವಾ ಕರ ವಸೂಲಿಗರಿಗೆ ಪಾವತಿಸಬಹುದಾಗಿದೆ. ಯಾವುದೇ ಸಾರ್ವಜನಿಕರು ಕಂದಾಯ ಪಾವತಿಸದೆ ಇದ್ದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ೧೯೯೩ ರ ಪ್ರಕರಣ ೨೦೦ ರಂತೆ ವಸೂಲಾತಿಗಾಗಿ ಕ್ರಮಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಪ್ರಕಟಣೆ ತಿಳಿಸಿದೆ.