ಕುಶಾಲನಗರ, ಮಾ. ೨: ದೇಶದ ಸಂವಿಧಾನದ ಸಾರ್ವಭೌಮತ್ವದ ಅಡಿಯಲ್ಲಿ, ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಶಾಶ್ವತವಾದ ಸಾಂವಿಧಾನಿಕ ಸಬಲೀಕರಣಕ್ಕಾಗಿ ಹಕ್ಕೊತ್ತಾಯ ಮಂಡಿಸುತ್ತಿದ್ದು, ಈ ಬಗ್ಗೆ ಸರ್ಕಾರ ತಮ್ಮ ಬೇಡಿಕೆಗಳ ಶಿಫಾರಸನ್ನು ಶಾಶ್ವತವಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಆಗ್ರಹ ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಜ್ಞಾಪನ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎನ್‌ಸಿ ಆಶ್ರಯದಲ್ಲಿ ಶಾಶ್ವತವಾದ ಸಾಂವಿಧಾನಿಕ ಸಬಲೀಕರಣಕ್ಕಾಗಿ ಹಕ್ಕೊತ್ತಾಯ ಮಂಡಿಸುತ್ತಿರುವ ನಡುವೆ ಕೊಡವರನ್ನು ನಿಗಮ ಮಂಡಳಿ ಮಾಡುವ ಮೂಲಕ ಅಲ್ಪತೃಪ್ತಿಪಡಿಸುವ ಚಿಂತನೆಯನ್ನು ಸರ್ಕಾರ ಕೈಬಿಡಬೇಕಾಗಿದೆ ಶಾಶ್ವತವಾದ ಕ್ರಮ ಅಗತ್ಯ ಎಂದರು.

ಕೊಡವ ಸಮುದಾಯ ೧೯೫೬ರ ರಾಜ್ಯ ಪುನರ್ ಸಂಘಟನೆ ಕಾಯ್ದೆ ಅಡಿಯಲ್ಲಿ ತಮ್ಮ ಸಾಂಪ್ರದಾಯಿಕ ಜನ್ಮಭೂಮಿ ಕೊಡಗು ಸಿ ರಾಜ್ಯವನ್ನು ಕಳೆದುಕೊಂಡಿದೆ. ನಂತರದ ದಿನಗಳಲ್ಲಿ ಎಲ್ಲಾ ಸರ್ಕಾರಗಳು ಕೊಡವರನ್ನು ಎರಡನೆಯ ದರ್ಜೆಯ ನಾಗರಿಕರಾಗಿ ಕಾಣುತ್ತಿರುವುದು ವಿಷಾದನೀಯ ಎಂದರು.

ಕೊಡವರಿಗೆ ತಾತ್ಕಾಲಿಕ ಪರಿಹಾರದ ಅಗತ್ಯವಿಲ್ಲ ಎಂದ ನಾಚಪ್ಪ ದೀರ್ಘಕಾಲದ ರಾಜಕೀಯ ಪರಿಹಾರ ನೀಡಲು ಪ್ರಯತ್ನಿಸಬೇಕು ಎಂದರು.

ಕೊಡವರಿಗೆ ಸಣ್ಣಪುಟ್ಟ ಆಸೆ-ಆಕಾಂಕ್ಷೆಗಳನ್ನು ತೋರಿಸಿ ಸಮಾಧಾನ ಮಾಡಲು ಸರ್ಕಾರ ಮುಂದಾಗುವುದು ಅವಶ್ಯಕತೆ ಇಲ್ಲ. ತಮ್ಮ ನೆಲ, ನೆಲೆಯ ಮೇಲೆ ಅಸ್ತಿತ್ವ ಉಳಿಸುವಂತಹ ಕಾಯ್ದೆ ಅಗತ್ಯವಾಗಿದೆ. ಅದು ಬಿಟ್ಟು ವಿಷಯಾಂತರ ಮಾಡುವ ಉದ್ದೇಶ ಸರಕಾರಕ್ಕೆ ಇರಬಾರದು. ಕೊಡವರ ಧಾರ್ಮಿಕ ಸಂಸ್ಕಾರ ಕೋವಿ ಹಕ್ಕು ಕಸಿದುಕೊಳ್ಳಲು ಪರಕಾಯ ಪ್ರವೇಶ ಮಾಡಲು ಹವಣಿಸುತ್ತಿರುವ ಕೊಡವರ ವಿರುದ್ಧವಾಗಿ ನಡೆಯುತ್ತಿರುವ ಶಕ್ತಿಗಳು ತಮ್ಮ ಸಮುದಾಯದ ಶಾಶ್ವತವಾದ ಹಕ್ಕೊತ್ತಾಯಗಳನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕೊಡವರ ಸಾಂಪ್ರದಾಯಿಕ ನೆಲೆಯನ್ನು ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರದ ವರದಿಯ ಶಿಫಾರಸಿನ ಅನ್ವಯ ಸ್ವಾಯತ್ತ ಪ್ರದೇಶವೆಂದು ಘೋಷಿಸಬೇಕೆಂದು ಸಿಎನ್‌ಸಿ ಪುನರುಚ್ಚರಿಸುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭ ಸಿಎನ್‌ಸಿ ಪ್ರಮುಖರಾದ ಚೆಂಬAಡ ಜನತ್ ಕುಮಾರ್ ಇದ್ದರು.