*ಗೋಣಿಕೊಪ್ಪ, ಮಾ. ೨: ಹೈಸೊಡ್ಲೂರು ಗ್ರಾಮದಲ್ಲಿರುವ ೧೮ ಎಕರೆ ೪೮ ಸೆಂಟ್ ಜಾಗವನ್ನು ನಿವೇಶನ ಹಾಗೂ ವಸತಿ ರಹಿತ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದವರಿಗೆ ಹಂಚಿಕೆ ಮಾಡುವಂತೆ ಹಾಗೂ ಕೆ.ಬಾಡಗ ಗ್ರಾಮದವರಿಗೆ ಕುಡಿಯುವ ನೀರು ಮತ್ತು ಇತರ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಪೊನ್ನಂಪೇಟೆ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಮೂರನೇ ದಿನವನ್ನು ಪೂರೈಸಿದೆ.
ಮೂರು ದಿನಗಳು ಕಳೆದರೂ ಧರಣಿ ನಿರತರ ಮನವೊಲಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ಅವರು ಭೇಟಿ ನೀಡಿ ಧರಣಿ ನಿರತರ ಮನವೊಲಿಸಲು ಪ್ರಯತ್ನಿಸಿದರಾದರೂ ಸಫಲತೆ ಕಂಡಿಲ್ಲ.
ಧರಣಿಯಲ್ಲಿ ನಿರಾಶ್ರಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಮೂರು ದಿನಗಳ ಹೋರಾಟದಲ್ಲಿ ಕೆಲವರು ಅಸ್ವಸ್ಥಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಅಸ್ವಸ್ಥಗೊಂಡವರಿಗೆ ಅನಾಹುತ ಸಂಭವಿಸಿದಲ್ಲಿ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ಹೇಳಿದ್ದಾರೆ.
ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಕೃಷ್ಣಪ್ಪ, ಮುಖಂಡ ಗೋವಿಂದಪ್ಪ, ಜಿಲ್ಲಾ ಖಜಾಂಜಿ ಮಹಾದೇವ್, ತಾಲೂಕು ಸಮಿತಿಯ ಕಾಟಿ ಮುರುಗ, ಗಿರೀಶ್, ರಜನಿಕಾಂತ್, ಚೆಲುವ ಹಾಗೂ ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪಡಿಕ್ಕಲ್ ಕುಸುಮಾವತಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.