ಮಡಿಕೇರಿ, ಮಾ. ೨: ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿವರಾತ್ರಿ ಹಬ್ಬಕ್ಕೂ ಮುನ್ನ ಮಕ್ಕಳಿಗೆ ವ್ಯವಹಾರ ಜ್ಞಾನ ಬೆಳೆಸುವ ಉದ್ದೇಶದಿಂದ ಏರ್ಪಡಿಸಿದ್ದ ಮಕ್ಕಳ ಸಂತೆಯು ಗಮನ ಸೆಳೆಯಿತು.
ಮಕ್ಕಳು ಶಾಲಾ ಅಂಗಳದಲ್ಲಿ ತಾವು ತಂದಿದ್ದ ವಸ್ತುಗಳನ್ನು ಮಾಮೂಲಿ ಸಂತೆಯಲ್ಲಿ ನಡೆಯುವ ವ್ಯಾಪಾರದ ಮಾದರಿಯಲ್ಲೇ ವ್ಯಾಪಾರ ಮಾಡಿದರು.
ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಟೊಮೆಟೊ, ಆಲೂಗೆಡ್ಡೆ, ಸೊಪ್ಪು ಎಲ್ಲ ಇದೆ ತಗೊಳ್ಳಿ ಅಮ್ಮಾ, ತಗೊಳ್ಳಿ ಅಣ್ಣ, ಸೌತೆಕಾಯಿ ಎಳೆ ಸೌತೆಕಾಯಿ.. ಬಾಳೆಹಣ್ಣು, ತಗೊಳಣ್ಣಾ, ಬಿಸಿ ಬಿಸಿ ಬಜ್ಜಿ ೧೦ ರೂಪಾಯಿಗೆ ನಾಲ್ಕು ಬನ್ನಿ ಸಾರ್ ಎನ್ನುವ ಬಿರುಸಿನ ವ್ಯಾಪಾರ ಮಾಡಿದರು.
ಮಕ್ಕಳ ಸಂತೆಯಲ್ಲಿ ವಿವಿಧ ಬಗೆಯ ಸೊಪ್ಪು, ತರಕಾರಿಗಳು, ಸಿಹಿ ತಿನಿಸುಗಳು, ತೆಂಗಿನಕಾಯಿ, ಹಣ್ಣುಗಳು, ಚುರುಮುರಿ, ಜ್ಯೂಸ್ ಸೇರಿದಂತೆ ಹಲವು ವಸ್ತು ಗಳನ್ನು ಮಾರಾಟ ಮಾಡಲಾಯಿತು.
(ಮೊದಲ ಪುಟದಿಂದ) ಮಕ್ಕಳ ಸಂತೆ ಕುರಿತು ಮಾಹಿತಿ ನೀಡಿದ ಶಾಲೆಯ ಮುಖ್ಯೋಪಾಧ್ಯಾಯಿನಿ ಪುದಿಯನೆರವನ ರೇವತಿ ರಮೇಶ್ ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಸುವುದರೊಂದಿಗೆ ಅವರಲ್ಲಿನ ಸೃಜನಶೀಲತೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಮಕ್ಕಳ ಸಂತೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ಮಕ್ಕಳಲ್ಲಿನ ಸೃಜನಶೀಲತೆಯನ್ನು ಹೊರಹಾಕಲು ಮಕ್ಕಳ ಸಂತೆ ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಮುಂದಾದ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕರ ತಂಡದ ಪ್ರಯತ್ನವನ್ನು ಶ್ಲಾಘಿಸಿದರು.
ಇಂತಹ ಚಟುವಟಿಕೆಗಳು ಮಕ್ಕಳಲ್ಲಿ ವ್ಯವಹಾರ ಕೌಶಲ್ಯತೆ, ತೂಕ-ಅಳತೆಗಳ ಬಗ್ಗೆ ಅರಿವು ಹಾಗೂ ಸಮಾಜದೊಂದಿಗೆ ಬೆರೆಯುವ ಬಗ್ಗೆ ತಿಳಿಸಬೇಕೆಂಬ ಉದ್ದೇಶದಿಂದ ನಡೆಸುವ ಮಕ್ಕಳ ಸಂತೆಯು ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಸಹಕಾರಿಯಾಗಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಅಭಿಪ್ರಾಯಪಟ್ಟರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಅಂಬೇಕಲ್ ನವೀನ್ ಮಾತನಾಡಿ, ಮಕ್ಕಳ ಸಂತೆಯಿAದ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ವ್ಯವಹಾರದ ಜ್ಞಾನ ಬೆಳೆಸಿದಂತಾಗುತ್ತದೆ ಎಂದರು.