ಚೆಟ್ಟಳ್ಳಿ,ಫೆ. ೨೮: ಪುರಾತನ ಕಾಲದಲ್ಲಿ ಖುಷಿಮುನಿಗಳು ಶಾಂತಚಿತ್ತವಾಗಿ ಕಾನನದ ನಡುವೆ ತಪಸ್ಸು ಮಾಡಿದರ ಫಲವಾಗಿ ಶಕ್ತಿ ಸ್ವರೂಪದಿಂದ ಉದ್ಭವಿಸಿದ ಶಿವನ ಲಿಂಗವೇ ಹೊಸ್ಕೇರಿಯ ಚಿಲಿಪಿಲಿ ದೇವಾಲಯದ ವಿಶೇಷ. ಬೆಳಗಿನ ಸೂರ್ಯನ ಬೆಳಕು ಬಂಡೆಗಳ ನಡುವೆ ಇರುವ ಶಿವಲಿಂಗಕ್ಕೆ ಬೀಳುತ್ತದೆ. ಕಾನನ ನಡುವೆ ಹಕ್ಕಿಗಳ, ಬಾವಲಿಗಳ ಚಿಲಿಪಿಲಿ ಕಲರವದಿಂದ ಚಿಲಿಪಿಲಿ ದೇವಾಲಯವೆಂದೇ ಹೆಸರಾಯಿತು. ಈ ಸ್ಥಾನದಲ್ಲಿ ನಂದಿ, ಬೇಟೆಗಾರ ಅಯ್ಯಪ್ಪ, ನಾಗನ ನೆಲೆಯಿದೆ. ಬಂಡೆಗಲ್ಲುಗಳಿರುವ ಶಿವನ ನೆಲೆಯಲ್ಲಿ ಮಳೆಗಾಲದಿಂದ ಹಿಡಿದು ಹಲವು ತಿಂಗಳುಗಳವರೆಗೆ ನೀರು ಹರಿದುಬರುತ್ತದೆ.

ಮಡಿಕೇರಿ ತಾಲೂಕಿನ ಹೊಸ್ಕೇರಿ ಗ್ರಾಮದ ಕಾಡಿನ ಒಳಗೆ ಬಂಡೆ ಕಲ್ಲುಗಳ ನಡುವೆ ಉದ್ಭವ ಶಿವ ಲಿಂಗಕ್ಕೆ ಅರ್ಚಕರು ನಿತ್ಯಪೂಜೆ ಸಲ್ಲಿಸುತ್ತಿದ್ದು, ವರ್ಷದ ಶಿವ ರಾತ್ರಿ ದಿನದ ರಾತ್ರಿ ಊರಿನವರು ವಿಶೇಷ ಪೂಜೆ ಸಲ್ಲಿಸಿ ಮಾರನೆ ದಿನ ಅನ್ನದಾನ ಕಾರ್ಯಕ್ರಮ ನೆರವೇರಲಿದೆ.

ಹಲವು ವರ್ಷಗಳಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ದೇವಾಲಯ ಸಮಿತಿ ನೆರವೇರಿಸುತ್ತಾ ಬರುತ್ತಿದ್ದು, ಊರಿನ ಹಲವು ಕುಟುಂಬಗಳ ದೇಣಿಗೆಯಿಂದ ದೇವಾಲಯದ ಕಾರ್ಯಗಳು ನೆರವೇರುತ್ತವೆ. ದೇವಾಲಯಕ್ಕೆ ಸಂಬAಧಿಸಿದ ೩ ಎಕರೆ ಜಾಗದಲ್ಲಿ ೨ ಎಕರೆ ಜಾಗದಲ್ಲಿ ಸುಮಾರು ೧೨ ವರ್ಷಗಳ ಹಿಂದೆ ಕಾಫಿಗಿಡ ಹಾಗೂ ಕರಿಮೆಣಸು ಬಳ್ಳಿಯನ್ನು ನೆಟ್ಟ ಫಲವಾಗಿ ಅದರ ಆದಾಯದಲ್ಲಿ ದೇವಾಲಯದ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಚೀಯಂಡಿರ ಉತ್ತಪ್ಪ ಮಾಹಿತಿ ನೀಡಿದ್ದಾರೆ.

ಉದ್ಭವ ಶಿವನ ನೆಲೆಗೆ ಅರ್ಚಕರು ಬಿಟ್ಟರೆ ಯಾರೂ ಪ್ರವೇಶಿಸಕೂಡದೆಂಬ ನಿರ್ಬಂಧವಿದೆ. ಕೆಲವರು ಇದನ್ನು ಉಲ್ಲಂಘಿಸಿದ ಕಾರಣಕ್ಕೆ ನಾಗನನ್ನು ಕಂಡಿರುವ ಬಗ್ಗೆ ಹೇಳುತ್ತಾರೆ. ಹಾಗಾಗಿ ಯಾರೂ ತೆರಳದಂತೆ ಗೇಟು ನಿರ್ಮಿಸಲಾಗಿದೆ. ಶಿವರಾತ್ರಿ ದಿನ ತಾ.೧ರಂದು (ಇಂದು) ರಾತ್ರಿ ಚಿಲಿಪಿಲಿ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ತಾ. ೨ ರ ಬುಧವಾರ ಬೆಳಿಗಿನಿಂದಲೇ ಪೂಜಾ ಕೈಂಕರ್ಯಗಳು ನಡೆದು ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಲಿದೆ. -ಪುತ್ತರಿರ ಕರುಣ್ ಕಾಳಯ್ಯ