ವೀರಾಜಪೇಟೆ, ಫೆ. ೨೮: ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ಪೊನ್ನಂಪೇಟೆ ತಾಲೂಕು ಕುಂದ ಗ್ರಾಮದಲ್ಲಿ ನಡೆದಿದೆ.
ಪೊನ್ನಂಪೇಟೆ ತಾಲೂಕು ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಕೈಮುಡಿಕೆ ಗ್ರಾಮದ ನಿವಾಸಿ ಕಾಫಿ ಬೆಳೆಗಾರ ಪಟ್ರಂಗಡ ಅನಿಲ್ ಹರೀಶ್ ಎಂಬವರಿಗೆ ಸೇರಿದ ೮ ತಿಂಗಳ ಹಾಲು ಕರೆಯುವ ಹಸು ಹುಲಿದಾಳಿಗೆ ಬಲಿಯಾಗಿದೆ. ಅನಿಲ್ ಅವರು ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ತಾ. ೨೬ರಂದು ಮೇಯಲು ಬಿಟ್ಟಿದ್ದಾರೆ. ಎಲ್ಲಾ ಹಸುಗಳ ಪೈಕಿ ಒಂದು ಹಸು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಸಂಜೆಯಾದ್ದರಿAದ ಹುಡುಕಲು ಪ್ರಯತ್ನ ಮಾಡದೇ ದಿನ ಕಳೆದು ಹಸು ಹುಡುಕಲು ಪ್ರಯತ್ನಿಸಿದ್ದಾರೆ. ಕಳೆದ ಎರಡು ದಿನಗಳಿಂದ ಕುಂದ ಬೆಟ್ಟದ ದೇವಾಲಯದಲ್ಲಿ ಉತ್ಸವ ನಡೆಯುತಿದ್ದು, ಗ್ರಾಮಸ್ಥರು ರಾತ್ರಿಯ ವೇಳೆಯಲ್ಲಿ ಹುಲಿ ಕಂಡಿರುವುದಾಗಿ ಗ್ರಾಮದಲ್ಲಿ ವಿಷಯ ಹರಿದಾಡಿತ್ತು. ಗ್ರಾಮದಲ್ಲಿ ಆತಂಕ ಮನೆ ಮಾತಾಗಿತ್ತು. ಹುಲಿಯು ಸಂಚರಿಸುತ್ತಿರುವುದರ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅನಿಲ್ ಅವರ ತೋಟಕ್ಕೆ ಹೊಂದಿಕೊAಡಿರುವAತೆ ಸನಿಹದ ಕೊಡಂದೇರ ಪವನ್ ಅವರ ತೋಟದ ಅಂಚಿನಲ್ಲಿ ಕಾಣೆಯಾಗಿರುವ ಹಸುವಿನ ಮೃತದೇಹ ಪತ್ತೆಯಾಗಿದೆ.
ಗ್ರಾಮಸ್ಥರು ನೀಡಿದÀ ದೂರಿನ ಮೇರೆಗೆ ಗುಮ್ಮಟ್ಟೀರ ದರ್ಶನ್ ಅವರು ಅರಣ್ಯ ಇಲಾಖೆಯ ಸಿಬ್ಬಂದಿಗಳೊAದಿಗೆ ಸ್ಥಳಕ್ಕೆ ತೆರಳಿ ಗೋವಿನ ಕಳೇಬರ ಪರಿಶೋಧನೆ ಮಾಡಿದ್ದಾರೆ. ಬಲಿಯಾಗಿರುವ ಹಸುವಿಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡುವುದಾಗಿ ಇಲಾಖೆಯ ಅರಣ್ಯ ಉಪ ಸಂರಕ್ಷಣಾಧಿಕಾರಿ ದಿವಾಕರ್ ತಿಳಿಸಿದರು. ಹುಲಿಯನ್ನು ಸೆರೆಹಿಡಿಯಲು ಪಂಜರ ಅಳವಡಿಸಿ ಹುಲಿಯ ಚಲನವಲನಗಳನ್ನು ಗಮನಿಸಲು ಸಿ.ಸಿ ಕ್ಯಾಮರಾಗಳನ್ನು ಅಳವಡಿಸುವುದಾಗಿ ಹಾಗೂ ಹುಲಿ ಸೆರೆ ಕಾರ್ಯಾಚರಣೆ ಮುಂದುವರೆಸುವುದಾಗಿ ತಿಳಿಸಿದರು.
-ಕಿಶೋರ್ ಕುಮಾರ್ ಶೆಟ್ಟಿ