ಸೋಮವಾರಪೇಟೆ, ಫೆ. ೨೮: ಕಳೆದ ಎರಡೂವರೆ ವರ್ಷಗಳ ಹಿಂದೆಯೇ ಭೂಮಿಪೂಜೆ ನೆರವೇರಿದ್ದರೂ ರಸ್ತೆ ಕಾಮಗಾರಿ ನಿರ್ವಹಿಸದ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರ ಅಸಮಾಧಾನ ಸ್ಫೋಟಗೊಂಡು ಹೆದ್ದಾರಿಗೆ ತಡೆಯೊಡ್ಡಿದ ಪರಿಣಾಮ, ಸಾರ್ವಜನಿಕರು ತೀವ್ರ ತೊಂದರೆಗೆ ಸಿಲುಕಿದ ಘಟನೆ ಸಂತೆ ದಿನವಾದ ಸೋಮವಾರದಂದು ನಡೆಯಿತು.
ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಗೋಡು ಗ್ರಾಮದಿಂದ ಕಿಬ್ಬೆಟ್ಟ ಸಂಪರ್ಕ ರಸ್ತೆಯು ತೀರಾ ಹಾಳಾಗಿದ್ದು, ಕಳೆದ ೨೦೧೯ರ ಸಾಲಿನಲ್ಲಿ ಮಳೆಹಾನಿ ಪರಿಹಾರ ನಿಧಿಯಡಿ ರೂ. ೭೫ ಲಕ್ಷ ಅನುದಾನ ಬಿಡುಗಡೆಗೊಂಡು ನೂತನ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿತ್ತು. ಕಾಮಗಾರಿಗೆ ಶಾಸಕ ಅಪ್ಪಚ್ಚುರಂಜನ್ ಅವರು ಚಾಲನೆ ನೀಡಿದ್ದರೂ ಈವರೆಗೆ ಗುತ್ತಿಗೆದಾರ ಕೆಲಸ ಪ್ರಾರಂಭಿಸಿರಲಿಲ್ಲ.
ರಸ್ತೆ ಕಾಮಗಾರಿ ಪ್ರಾರಂಭಿಸುವAತೆ ಗ್ರಾಮಸ್ಥರು ಅನೇಕ ಬಾರಿ ಶಾಸಕ ಅಪ್ಪಚ್ಚುರಂಜನ್, ಲೋಕೋಪಯೋಗಿ ಇಲಾಖೆಯ ಅಭಿಯಂತರ ಮೋಹನ್‌ಕುಮಾರ್ ಅವರುಗಳಿಗೆ ಮನವಿ ಸಲ್ಲಿಸಿದ್ದರು. ಇದರೊಂದಿಗೆ ಗುತ್ತಿಗೆದಾರರ ಮನೆಗೂ ಹೋಗಿ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು.
ಇದಕ್ಕೆ ಈವರೆಗೆ ಯಾವುದೇ ಸ್ಪಂದನ ದೊರೆಯದ ಹಿನ್ನೆಲೆ ಇಂದು ಗ್ರಾಮಸ್ಥರು ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿಯನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಟೆಂಡರ್ ಪಡೆದಿದ್ದರೂ ಕಾಮಗಾರಿ ನಡೆಸದ ಗುತ್ತಿಗೆದಾರ, ಸಂಬAಧಿಸಿದ ಇಲಾಖೆಯ ಅಭಿಯಂತರರು, ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಸಂತೆ ದಿನವಾದ ಸೋಮವಾರದಂದು ದಿಢೀರ್ ರಸ್ತೆ ತಡೆ ನಡೆಸಿದ್ದರಿಂದ ರಾಜ್ಯ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು, ಆಟೋಗಳು, ಖಾಸಗಿ ವಾಹನಗಳಲ್ಲಿದ್ದ ಮಂದಿ ಸಮಸ್ಯೆಗೆ ಒಳಗಾದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಗುತ್ತಿಗೆದಾರ ಉದಯಕುಮಾರ್ ಅವರು, ನಾಳೆಯಿಂದಲೇ ಕಾಮಗಾರಿ ಪ್ರಾರಂಭಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪದ ಗ್ರಾಮಸ್ಥರು, ಗುತ್ತಿಗೆದಾರರ ವಿರುದ್ಧ ಘೋಷಣೆ ಕೂಗಿ ತರಾಟೆಗೆ ತೆಗೆದುಕೊಂಡರು. ‘ನಿಮ್ಮ ಭರವಸೆ ನಮಗೆ ಬೇಡ-ರಸ್ತೆ ಬೇಕು’ ಎಂದು ಒತ್ತಾಯಿಸಿ ಸ್ಥಳದಿಂದ ವಾಪಸ್ ಕಳುಹಿಸಿ ರಸ್ತೆ ತಡೆ ಮುಂದುವರೆಸಿದರು.
ನAತರ ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಇಲಾಖೆಯ ಮೇಲಧಿಕಾರಿಗಳನ್ನು ಕರೆಸುವಂತೆ ಪಟ್ಟುಹಿಡಿದರು.
ರಸ್ತೆ ಕಾಮಗಾರಿಯ ಟೆಂಡರ್ ಪಡೆದು ಈವರೆಗೆ ಕೆಲಸ ಮಾಡದ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ. ಟೆಂಡರ್ ನೀಡಿರುವುದನ್ನು ವಾಪಸ್ ಪಡೆದು ಬೇರೆ ಗುತ್ತಿಗೆದಾರರಿಗೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಾರ್ಚ್ ೧೦ರ ವರೆಗೆ ಕಾಲಾವಕಾಶ ನೀಡುವಂತೆ ಅಭಿಯಂತರರು ಮನವಿ ಮಾಡಿದರು.
ಇದಕ್ಕೆ ಒಪ್ಪದ ಗ್ರಾಮಸ್ಥರು, ಇಲಾಖೆಯ ಕಾರ್ಯಪಾಲಕ ಅಭಿಯಂತರರನ್ನು ಸ್ಥಳಕ್ಕೆ ಕರೆಸಿ, ಅಲ್ಲಿಯವರೆಗೂ ನಿಮ್ಮನ್ನು ಹೊರಹೋಗಲು ಬಿಡುವುದಿಲ್ಲ ಎಂದು ದಿಗ್ಬಂಧನ ವಿಧಿಸಿದರು. ಅಧಿಕಾರಿ ಬರುವವರೆಗೂ ನಮ್ಮೊಂದಿಗೆ ಕುಳಿತುಕೊಳ್ಳಿ ಎಂದರು. ಎಇಇ ಮೋಹನ್‌ಕುಮಾರ್ ಅವರು ಗ್ರಾಮಸ್ಥರೊಂದಿಗೆ ಕುಳಿತುಕೊಂಡ ನಂತರ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ನಂತರ ಸ್ಥಳಕ್ಕಾಗಮಿಸಿದ ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗರಾಜ್ ಅವರೊಂದಿಗೆ ಮಾತುಕತೆ ನಡೆಸಿದ ಗ್ರಾಮಸ್ಥರು, ತಕ್ಷಣ ಕಾಮಗಾರಿ ಪ್ರಾರಂಭಿಸುವ ಭರವಸೆ ದೊರೆತ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟರು. ಒಂದು ವೇಳೆ ಭರವಸೆ ಈಡೇರದಿದ್ದರೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎA. ಪ್ರಕಾಶ್, ಕಳೆದ ೨೦೧೯ರಲ್ಲಿ ಶಾಸಕರು ಭೂಮಿಪೂಜೆ ನೆರವೇರಿಸಿದ್ದರೂ ರಸ್ತೆ ಕಾಮಗಾರಿ ಕೈಗೊಳ್ಳದ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ರಸ್ತೆ ಅವ್ಯವಸ್ಥೆಯಿಂದ ಗ್ರಾಮಸ್ಥರು ತೀರಾ ಸಮಸ್ಯೆಗೆ ಸಿಲುಕಿದ್ದಾರೆ. ಶಾಲಾ-ಕಾಲೇಜು ವಾಹನಗಳು, ಆಟೋಗಳು ಊರಿಗೆ ಬರುತ್ತಿಲ್ಲ. ಕೃಷಿ ಉತ್ಪನ್ನಗಳನ್ನು ಮನೆಗೆ ಸಾಗಿಸಲು ಆಗುತ್ತಿಲ್ಲ. ಗುಂಡಿಬಿದ್ದ ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ವಾಹನಗಳು ದುಸ್ಥಿತಿಗೆ ಬರುತ್ತಿವೆ. ದ್ವಿಚಕ್ರ ಸವಾರರು ಆಗಾಗ್ಗೆ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಗುತ್ತಿಗೆದಾರ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಾಭಿವೃದ್ಧಿ ಸಮಿತಿ ಕಾರ್ಯದರ್ಶಿ ನಿರಂಜನ್, ಗ್ರಾ.ಪಂ. ಮಾಜಿ ಸದಸ್ಯ ಭುವನ್, ಪ್ರಮುಖರಾದ ಎಂ.ಎA. ಕಾಳಪ್ಪ, ಬಂಗೀರಮನೆ ಸತೀಶ್, ಹೆಚ್.ಸಿ. ಸುರೇಶ್, ಕೊಮಾರಿ ಸತೀಶ್, ಎಂ.ಎA. ಕಾಳಪ್ಪ, ದಿನೇಶ್, ಶಶಿಕಲ, ರೂಪಾ ಸುರೇಶ್, ಕಮಲ, ಚಂದ್ರಕಲಾ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.