*ಗೋಣಿಕೊಪ್ಪ, ಫೆ. ೨೭: ತಿತಿಮತಿ ತಾರಿಕಟ್ಟೆ ಗ್ರಾಮದ ವಿಜಯ ಅವರ ಕಾಫಿ ತೋಟದಲ್ಲಿ ೧೦ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸಲು ಈ ಭಾಗದಲ್ಲಿ ಅರಣ್ಯ ಇಲಾಖೆ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುತ್ತಿರುವುದೇ ಕಾರಣವಾಗಿದೆ ಎಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕ ಆರೋಪಿಸಿದೆ.

ಆನೆ ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆನಷ್ಟಕ್ಕೆ ಕಾರಣವಾದ ವಿಜಯ್ ಅವರ ತೋಟಕ್ಕೆ ರೈತ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ತಕ್ಷಣ ನಷ್ಟಪರಿಹಾರವನ್ನು ಒದಗಿಸಿಕೊಡಲು ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು.

ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವಾಗ ಆನೆಗಳ ಗುಂಪುಗಳನ್ನು ಚದುರಿಸಿ ರೇಡಿಯೋ ಕಾಲರ್ ಅಳವಡಿಸುತ್ತಿದ್ದು, ಇದರಿಂದ ಆನೆಗಳು ಗಾಬರಿಗೊಂಡು ರೈತರ ತೋಟಗಳಲ್ಲಿ ಬೆಳೆದು ನಿಂತ ಬೆಳೆಗಳನ್ನು ನಾಶಮಾಡುತ್ತಿವೆ. ಅಲ್ಲದೇ ರೈತರ ತೋಟಗಳಲ್ಲಿ ಅಳವಡಿಸಿದ ಸೋಲಾರ್ ಬೇಲಿಗಳನ್ನು ಕಿತ್ತು ಎಸೆಯುತ್ತಿದ್ದು, ನೀರು ಹಾರಿಸುವ ಪೈಪ್‌ಗಳನ್ನು ತುಳಿದು ನಾಶಪಡಿಸುತ್ತಿದೆ.

ಬೆಳೆಗಳು ಕಟಾವಿಗೆ ಬಂದ ಸಂದರ್ಭದಲ್ಲಿ ಅರಣ್ಯ ಇಲಾಖೆ ರೇಡಿಯೋ ಕಾಲರ್ ಅಳವಡಿಸುತ್ತಿರುವ ಕಾರ್ಯಕ್ಕೆ ಮುಂದಾಗಿರುವುದನ್ನು ಖಂಡಿಸಿದರು. ಕೂಡಲೇ ಸೂಕ್ತ ರೀತಿಯಲ್ಲಿ ಆನೆ ಓಡಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ರೈತ ಸಂಘದ ಉಪಾಧ್ಯಕ್ಷ ಚೆಪ್ಪುಡೀರ ಕಾರ್ಯಪ್ಪ, ಪದಾಧಿಕಾರಿಗಳಾದ ಮಹೇಶ್, ಶರೀನ್, ಶರಣು, ಭೀಮಯ, ರಾಯ್ ಇದ್ದರು. -ಎನ್.ಎನ್. ದಿನೇಶ್