ಸೋಮವಾರಪೇಟೆ, ಫೆ. ೨೮: ಕಾಫಿ ತೋಟದಲ್ಲಿ ಕರಿಮೆಣಸು ಕೊಯ್ಲು ಮಾಡುತ್ತಿದ್ದ ಸಂದರ್ಭ ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ಸ್ಪರ್ಶಗೊಂಡು ತಮಿಳುನಾಡು ಮೂಲದ ಕಾರ್ಮಿಕನೋರ್ವ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಇಂದು ನಡೆದಿದೆ.
ಮಾದಾಪುರ-ಸುಂಟಿಕೊಪ್ಪ ರಸ್ತೆ ಮಧ್ಯೆ ಇರುವ ಗರಗಂದೂರು ಗ್ರಾಮದ ಬೋಪಣ್ಣ ಎಂಬವರಿಗೆ ಸೇರಿದ ರಾಜಪ್ರಭ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದ್ದು, ಕರಿಮೆಣಸು ಕೊಯ್ಲು ಮಾಡುತ್ತಿದ್ದ, ತಮಿಳುನಾಡಿನ ತಿರುವಣ್ಣಾ ಮಲೈ ನಿವಾಸಿ ಗೋವಿಂದ ಎಂಬವರ ಪುತ್ರ, ಕಾರ್ಮಿಕ ವಿಜಯಕಾಂತ್(೨೦) ಎಂಬಾತ ಸ್ಥಳದಲ್ಲೇ ಅಸುನೀಗಿದ್ದಾನೆ.
ತಮಿಳುನಾಡಿನಿಂದ ಕೆಲ ದಿನಗಳ ಹಿಂದಷ್ಟೇ ಕೂಲಿಕೆಲಸಕ್ಕೆ ಆಗಮಿಸಿದ್ದ ವಿಜಯಕಾಂತ್ , ಸ್ಥಳೀಯ ಲೈನ್ ಮನೆಯಲ್ಲಿ ಕುಟುಂಬದೊAದಿಗೆ ನೆಲೆಸಿದ್ದ. ಇಂದು ಮಧ್ಯಾಹ್ನ ಕಾರ್ಮಿಕರು ಊಟಕ್ಕೆಂದು ತೆರಳಿದ ಸಂದರ್ಭ ಕರಿಮೆಣಸು ಕೊಯ್ಲು ಮಾಡುತ್ತಿದ್ದ ಸಂದರ್ಭ, ಆಕಸ್ಮಿಕವಾಗಿ ಅವಘಡಕ್ಕೆ ತುತ್ತಾಗಿದ್ದಾನೆ.
ಸುಮಾರು ೨೦ ಅಡಿ ಎತ್ತರವಿರುವ ಅಲ್ಯೂಮಿನಿಯಂ ಏಣಿಯು ತೋಟದೊಳಗೆ ಹಾದುಹೋಗಿದ್ದ ೧೧ ಕೆ.ವಿ. ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ಸ್ಪರ್ಶಿಸಿದೆ. ಪರಿಣಾಮ ಏಣಿಯ ಮೂಲಕ ವಿದ್ಯುತ್ ಪ್ರವಹಿಸಿದ್ದರಿಂದಾಗಿ ವಿಜಯಕಾಂತ್ ಸ್ಥಳದಲ್ಲೇ ಅಸುನೀಗಿದ್ದಾನೆ.
ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಮಂಜು, ಮುಖ್ಯಪೇದೆ ಕಾವೇರಪ್ಪ, ಸಿಬ್ಬಂದಿ ಉಮೇಶ್ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.