ಫೆ. 27: ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ನಿಮಿಷಕ್ಕೆ 390 ಲೀಟರ್ ಆಮ್ಲಜನಕ ಉತ್ಪಾದನೆ ಮಾಡುವ ಸಾಮಥ್ರ್ಯ ಹೊಂದಿರುವ ಬೃಹತ್ ಆಮ್ಲಜನಕ ಉತ್ಪಾದನಾ ಘಟಕ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.
ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಮೂಲಕ ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೂ. 1 ಕೋಟಿ ವೆಚ್ಚದ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣವಾಗಿದ್ದು, ‘ಆನ್ಸೈಡ್ ಆಕ್ಸಿಜನ್ ಜನರೇಟ್ ಯೂನಿಟ್’ನ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ.
ಆಮ್ಲಜನಕ ಉತ್ಪಾದನಾ ಘಟಕಕ್ಕೆ ನೂತನ ಕಟ್ಟಡ, ಜನರೇಟರ್ ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಲಾಗಿದ್ದು, ವಿದ್ಯುತ್ ಸ್ಥಗಿತಗೊಂಡರೂ ಸಹ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ತಡೆಗಟ್ಟಲು ಸ್ವಯಂ ಚಾಲಿತ ಜನರೇಟರ್ ಅಳವಡಿಸಲಾಗಿದೆ.
ಈ ನೂತನ ಘಟಕ ನಿರ್ಮಾಣದಿಂದಾಗಿ ತುರ್ತು ಸಂದರ್ಭದಲ್ಲಿ ಆಕ್ಸಿಜನ್ ಸೇವೆಗಾಗಿ ಮಡಿಕೇರಿ, ಮೈಸೂರು, ಮಂಗಳೂರು ಹಾಗೂ ಹಾಸನದ ಆಸ್ಪತ್ರೆಗಳಿಗೆ ತೆರಳುವುದು ತಪ್ಪಿದಂತಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ 1 ನಿಮಿಷಕ್ಕೆ 390 ಲೀಟರ್ ಆಮ್ಲಜನಕ ಉತ್ಪಾದನೆಯಾಗಲಿದ್ದು, ಈ ಭಾಗದ ರೋಗಿಗಳಿಗೆ ವರದಾನವಾಗುವ ನಿರೀಕ್ಷೆಯಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರ ಪ್ರಯತ್ನದ ಫಲವಾಗಿ ಸರ್ಕಾರ ಅನುದಾನ ಮಂಜೂರು ಮಾಡಿದ್ದು, ಆಕ್ಸಿಜನ್ ಘಟಕದ ನಿರ್ಮಾಣಕ್ಕಾಗಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಕೋವಿಡ್ ಸೋಂಕಿತ ಮತ್ತು ನಾನ್ಕೋವಿಡ್ ರೋಗಿಗಳಿಗೆ ಅನುಕೂಲವಾಗಲು 50 ಬೆಡ್ಗಳಿಗೆ ಆಕ್ಸಿಜನ್ ಸೇವೆಯನ್ನು ಒದಗಿಸಲಾಗಿದೆ. ಆದರೆ ಆಕ್ಸಿಜನ್ ಖಾಲಿಯಾದರೆ ಮೈಸೂರಿನಿಂದ ತುಂಬಿಸಿ ತರಬೇಕಿತ್ತು. ಇಲ್ಲೇ ಘಟಕ ಆರಂಭವಾದರೆ ಸ್ಥಳೀಯವಾಗಿ ಆಸ್ಪತ್ರೆ ಆವರಣದಲ್ಲಿಯೇ ನಿಮಿಷಕ್ಕೆ 390 ಲೀಟರ್ ಆಕ್ಸಿಜನ್ ಉತ್ಪಾದನೆಯಾಗುವುದರಿಂದ ಮೈಸೂರಿಗೆ ಹೋಗುವ ಅಗತ್ಯವಿರುವುದಿಲ್ಲ. ಇದರೊಂದಿಗೆ 100 ರೋಗಿಗಳಿಗೆ ಏಕಕಾಲದಲ್ಲಿ ಆಮ್ಲಜನಕ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರುಗಳು ಅಭಿಪ್ರಾಯಿಸಿದ್ದಾರೆ.
ಆಕ್ಸಿಜನ್ ಘಟಕಕ್ಕೆ ಅಗತ್ಯವಿರುವ ಕಂಪ್ರೆಸರ್, ವೆಂಟಿಲೇಟರ್ ಮತ್ತು ಆಕ್ಸಿಜನ್ಕಾನ್ಸನ್ಟ್ರೇಟರ್ ಸೇರಿದಂತೆ ಇನ್ನಿತರ ಸುಧಾರಿತ ಯಂತ್ರದ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಈ ಯಂತ್ರೋಪಕರಣವು ಹೊರಗಿನ ಗಾಳಿಯನ್ನು ಎಳೆದುಕೊಂಡು ಶುದ್ಧ ಆಮ್ಲಜನಕ ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ. ನಂತರ ನೇರವಾಗಿ ರೋಗಿಗಳಿಗೆ ನೀಡಲು ಸಾಧ್ಯವಾಗುತ್ತದೆ ಎಂದು ಸಂಬಂಧಿಸಿದ ಏಜೆನ್ಸಿ ಅಭಿಯಂತರ ಪುಷ್ಪಕ್ ತಿಳಿಸಿದ್ದಾರೆ.
ಕೊರೊನಾ ಪ್ರಥಮ ಅಲೆಗಿಂತಲೂ ಎರಡನೇ ಅಲೆಯಲ್ಲಿ ದೇಶದಲ್ಲಿ ಅತೀ ಹೆಚ್ಚು ಸಾವುಗಳು ಸಂಭವಿಸಿವೆ. ಮೂರನೇ ಅಲೆಯಲ್ಲಿ ಅಷ್ಟೊಂದು ಗಂಭೀರತೆ ಕಂಡುಬಂದಿಲ್ಲವಾದರೂ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಮುಂದಾಗಿದೆ.
3ನೇ ಅಲೆಯಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ಹೆಚ್ಚಾಗಿ ಕಂಡುಬರುವ ಬಗ್ಗೆ ತಜ್ಞರು ಅಭಿಪ್ರಾಯಿಸಿದ್ದ ಹಿನ್ನೆಲೆ, ಅಗತ್ಯವಿರುವ ಆಕ್ಸಿಜನ್ ಉತ್ಪಾದನೆಗಾಗಿ ಕೇಂದ್ರ ಸರ್ಕಾರ ‘ಪ್ರಾಜೆಕ್ಟ್ ಒ2’ ಯೋಜನೆಗೆ ಚಾಲನೆ ನೀಡಿತ್ತು. ಇದರಿಂದಾಗಿ ಆರೋಗ್ಯ ಇಲಾಖೆಯು ಆಮ್ಲಜನಕ ಉತ್ಪಾದನಾ ವಲಯಕ್ಕೆ ವಿಶೇಷ ಆದ್ಯತೆಯನ್ನು ನೀಡಿದ್ದು, ಬೃಹತ್ ಘಟಕಗಳ ನಿರ್ಮಾಣಕ್ಕೆ ಸಹಕಾರಿಯಾಗಿದೆ.
ಮೋಬಿಯಸ್ನಿಂದಲೂ ನೆರವು: ಇದರೊಂದಿಗೆ ಸ್ವಯಂಸೇವಾ ಸಂಸ್ಥೆಯಾಗಿರುವ ಮೋಬಿಯಸ್ ಫೌಂಡೇಷನ್ನಿಂದಲೂ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ 5 ‘ಮಾಡುಲರ್ ಆಕ್ಸಿಜನ್ ಘಟಕ’ಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಈ ಯೂನಿಟ್ಗಳನ್ನು ಅಳವಡಿಸಲಾಗಿದೆ. ಈಗಾಗಲೇ ಅಳವಡಿಸಿರುವ ಬೃಹತ್ ಆಮ್ಲಜನಕ ಘಟಕದಲ್ಲಿ ಆಕಸ್ಮಿಕವಾಗಿ ತಾಂತ್ರಿಕ ಸಮಸ್ಯೆ ಕಂಡುಬಂದರೆ ಈ ‘ಮಾಡುಲರ್ ಯೂನಿಟ್’ಗಳನ್ನು ತಕ್ಷಣಕ್ಕೆ ಬಳಸಿಕೊಳ್ಳಬಹುದಾಗಿದೆ. ಕಡಿಮೆ ನಿರ್ವಹಣಾ ವೆಚ್ಚದಲ್ಲಿ ರೋಗಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಬಹುದಾಗಿದೆ. ಒಂದು ನಿಮಿಷದಲ್ಲಿ 10 ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮಥ್ರ್ಯಗಳನ್ನು ಈ ಘಟಕ ಹೊಂದಿದೆ.
ಗ್ರಾಮೀಣ ಪ್ರದೇಶದ ಮಂದಿ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದು, ಆಕ್ಸಿಜನ್ ಬೇಕಾಗುವಂತಹ ತುರ್ತು ಸಂದರ್ಭದಲ್ಲಿ ಮಡಿಕೇರಿ, ಮೈಸೂರು, ಹಾಸನಕ್ಕೆ ತೆರಳಬೇಕಾಗಿತ್ತು. ಇದೀಗ ಸ್ಥಳೀಯವಾಗಿಯೇ ಆಕ್ಸಿಜನ್ ಸಹಿತ ಬೆಡ್ಗಳ ವ್ಯವಸ್ಥೆಯಾಗಿದ್ದು, ರೋಗಿಗಳ ಪಾಲಿಗೆ ಹೆಚ್ಚಿನ ಉಪಯೋಗವಾಗಲಿದೆ.
-ವಿಜಯ್ ಹಾನಗಲ್