ಮಡಿಕೇರಿ,ಫೆ. ೨೭: ರಾಜ್ಯ ಅಥವಾ ಕೇಂದ್ರ ಸರಕಾರದ ಮೂಲಕ ಪ್ರತಿವರ್ಷ ಮಂಡಿಸಲ್ಪಡುವ ವಾರ್ಷಿಕ ಮುಂಗಡ ಪತ್ರ (ಬಜೆಟ್) ಕೊಡಗು ಜಿಲ್ಲೆಯ ಪಾಲಿಗೆ ಕೇವಲ ಇದೊಂದು ವಾರ್ಷಿಕವಾದ ಕಾರ್ಯಕ್ರಮ ಎಂಬAತೆಯೇ ಬಿಂಬಿತವಾಗುತ್ತಿರುವುದು ಕೊಡಗಿನ ಜನತೆಗೆ ಹೊಸದೇನಲ್ಲ. ಯಾವದೇ ಸರಕಾರಗಳು ಇರಲಿ ಈ ಜಿಲ್ಲೆ ಮಾತ್ರ ಸೂಕ್ತ ರೀತಿಯಲ್ಲಿ ಪರಿಗಣಿಸಲ್ಪಡದೇ ನಿರ್ಲಕ್ಷö್ಯಕ್ಕೆ ತುತ್ತಾಗುತ್ತಾ ಬರುತ್ತಿದೆ ಎಂಬದರಲ್ಲಿ ಎರಡು ಮಾತಿಲ್ಲ. ಕೊಡಗಿಗಾಗಿ ಯಾವದೇ ರೀತಿಯ ವಿಶೇಷ ಯೋಜನೆಗಳಾಗಲಿ, ಕೊಡುಗೆಗಳಾಗಲಿ ಪ್ರಕಟಗೊಳ್ಳುವದು ಕನಸ್ಸಿನ ಮಾತು ಎಂಬ ಭಾವನೆ ಜನತೆಯಲ್ಲಿದೆ. ಆದರೂ ಬಜೆಟ್ ಹತ್ತಿರ ಬರುತ್ತಿರುವಂತೆ ಹೊಸ ಹೊಸ ನಿರೀಕ್ಷೆಗಳು, ಆಶಾಭಾವನೆಗಳು ಗರಿಗೆದರುತ್ತವೆ. ಇದೇ ರೀತಿಯಲ್ಲಿ ಈ ಬಾರಿಯೂ ರಾಜ್ಯ ಬಜೆಟ್ ಸಮೀಪಿಸುತ್ತಿದೆ. ಈಗಾಗಲೇ ಕೇಂದ್ರ ಸರಕಾರದ ಬಜೆಟ್ ಮಂಡನೆ ಯಾಗಿದೆ. ಇದೀಗ ನಮ್ಮ ರಾಜ್ಯದ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದ್ದು ಸಹಜವಾಗಿಯೇ ಜಿಲ್ಲೆಯ ಜನರಲ್ಲಿ ಹತ್ತು ಹಲವಾರು ನಿರೀಕ್ಷೆಗಳು ಮತ್ತೊಮ್ಮೆ ಆರಂಭವಾಗಿದೆ. ಅದರಲ್ಲೂ ಪ್ರಸಕ್ತ ವರ್ಷದ ಬಜೆಟ್ ಒಂದು ರೀತಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆಯೂ ಒಂದಷ್ಟು ಪ್ರಭಾವ ಬೀರುವ ಸಾಧ್ಯತೆಗಳಿರುವದರಿಂದಾಗಿ ಹೆಚ್ಚು ಕುತೂಹಲ ಸೃಷ್ಟಿಸಿದೆ.
ಮಲೆನಾಡು ಜಿಲ್ಲೆಯಾಗಿದ್ದು ವಿಭಿನ್ನ ಸಮಸ್ಯೆಗಳಿರುವ ಕೊಡಗಿಗೆ ಒಂದಷ್ಟು ವಿಶೇಷ (ಮೊದಲ ಪುಟದಿಂದ) ಕೊಡುಗೆಗಳನ್ನು ಸರಕಾರ ನೀಡಬೇಕು ಎಂಬದು ಜನತೆಯ ಅಂಬೋಣ... ಆದರೆ ಇಡೀ ರಾಜ್ಯ ವ್ಯಾಪಿಯಾಗಿ ಪ್ರಕಟಗೊಳ್ಳುವ ಯೋಜನೆಗಳು ಹೊರತುಪಡಿಸಿದರೆ, ಕೇವಲ ಕೊಡಗಿಗೆ ಎಂಬAತೆ ಬಹುಶಃ ಹಲವಾರು ವರ್ಷಗಳಿಂದ ಏನೂ ದೊರೆತಿಲ್ಲ. ಒಂದು ವೇಳೆ ಸರಕಾರಗಳು ಏನಾದರು ಅಂಶಗಳನ್ನು ಪ್ರಕಟಿಸಿದರೂ ಅದು ಕಾರ್ಯಗತವಾಗಲು ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ ಎಂಬದು ಈ ಹಿಂದಿನ ಅನುಭವದ ಮಾತುಗಳು.
ಭಾರೀ ನಿರೀಕ್ಷೆಗಳಲ್ಲಿ: ಈ ಬಾರಿಯ ಬಜೆಟ್ನಲ್ಲಿ ಕೆಲವೊಂದು ಭಾರೀ ನಿರೀಕ್ಷೆಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಈಗ ಕೇಳಿಬರುತ್ತಿರುವ ಕೊಡವ ಅಭಿವೃದ್ಧಿ ಮಂಡಳಿ ರಚನೆ, ಕೊಡಗಿಗೆ ಪ್ರತ್ಯೇಕ ಕ್ರೀಡಾ ವಿಶ್ವ ವಿದ್ಯಾನಿಲಯ ಪ್ರಾರಂಭಿಸುವುದು, ರಸ್ತೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ, ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ಇನ್ನೂ ಬಾಕಿ ಇರುವ ಪರಿಹಾರೋಪಾಯಗಳ ಈಡೇರಿಕೆ, ರೈತರ ನೆರವಿಗೆ ಯೋಜನೆಗಳು, ರೈತರ ಪಂಪ್ ಸೆಟ್‌ಗೆ ಉಚಿತ ವಿದ್ಯುತ್ ಇತ್ಯಾದಿಗಳಾಗಿವೆ. ಮತ್ತೊಂದು ಪ್ರಮುಖವಾದ ಅಂಶವೆAದರೆ ಕೊಡಗಿನಲ್ಲಿ ಮಾನವ-ವನ್ಯಪ್ರಾಣಿಗಳ ಸಂಘರ್ಷ ತಡೆಗೆ ಅನಿವಾರ್ಯವಾದ ಕಾರ್ಯಕ್ರಮಗಳ ಅನುಷ್ಠಾನ... ಈ ರೀತಿಯಾಗಿ ಹಲವಷ್ಟು ನಿರೀಕ್ಷೆಗಳು ಹೊಸ್ತಿಲಲ್ಲಿವೆ.
ಬಾಕಿಗಳ ಪಟ್ಟಿ: ಇನ್ನೂ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಹಲವಾರು ಯೋಜನೆಗಳನ್ನು ಪಟ್ಟಿ ಮಾಡುತ್ತಾ ಹೋದಲ್ಲಿ ಇದು ಸಾಕಷ್ಟಿವೆ.
ಉದಾಹರಣೆಗಳು: ಹಲವಾರು ವರ್ಷಗಳಿಂದ ಅಬಕಾರಿ ಭವನ ಕಾಡು ಪಾಲಾಗಿದೆ. ಕೊಡವ ಹೆರಿಟೇಜ್ ಸೆಂಟರ್ ಪೂರ್ಣಗೊಂಡಿಲ್ಲ. ಜಿಲ್ಲಾ ಕೇಂದ್ರದಲ್ಲಿನ ಸುವರ್ಣ ಸಾಂಸ್ಕೃತಿಕ ಭವನ ವರ್ಷಾನುಗಟ್ಟಲೆಯಿಂದ ತಲೆ ಎತ್ತುತ್ತಿಲ್ಲ. ಗೋಣಿಕೊಪ್ಪಲು ಖಾಸಗಿ ಬಸ್ ನಿಲ್ದಾಣ, ವೀರಾಜಪೇಟೆಗೆ ಸರಕಾರಿ ಬಸ್ ಡಿಪೋ, ಕೂಟಿಯಾಲ ಸಂಪರ್ಕ ರಸ್ತೆ, ದಸರಾ ಉತ್ಸವ - ಕೌಟುಂಬಿಕ ಕ್ರೀಡೆಗೆ ಬಜೆಟ್‌ನಲ್ಲೇ ಅನುದಾನ ಪ್ರಕಟ. ಜಿಲ್ಲಾ ಕ್ರೀಡಾಂಗಣದ ಕಾಯಕಲ್ಪ, ಮಡಿಕೇರಿಯ ಮಿನಿ ವಿಧಾನಸೌಧ, ಹಿಂದಿನ ವರ್ಷಗಳ ಪ್ರಾಕೃತಿಕ ದುರಂತದ ಸಂತ್ರಸ್ತರಿಗೆ ಬಾಕಿ ಇರುವ ಅಗತ್ಯ ನೆರವು, ಜಾಗಕ್ಕೆ ಸಂಬAಧಿಸಿದ ದಾಖಲೆಗಳ ವಿಚಾರ, ಪ್ರವಾಸೋಧ್ಯಮಕ್ಕೆ ಪೂರಕ ಸೌಲಭ್ಯಗಳು ಈ ರೀತಿಯಾಗಿ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಈ ಅಂಶಗಳು ಒಂದೆಡೆಯಾದರೆ ಇದರೊಂದಿಗೆ ಈ ಹಿಂದೆ ಪ್ರಕಟಿಸಿರುವ ಹಲವು ಯೋಜನೆಗಳು ಅದೇನಾಯಿತೋ ಯಾರಿಗೂ ಗೊತ್ತಿಲ್ಲ. ಇಂತಹ ಪರಿಸ್ಥಿತಿಯ ನಡುವೆ ಮತ್ತೊಂದು ಬಜೆಟ್ ಬರುತ್ತಿದೆ.. ಏನೇನು ಆಗಲಿದೆಯೋ ಕಾದು ನೋಡಬೇಕಷ್ಟೆ...