ಕೂಡಿಗೆ, ಫೆ. ೨೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರದ ಕಸ ವಿಲೇವಾರಿ ಘಟಕದ ಕೇಂದ್ರದಲ್ಲಿ ನೂತನ ಆಧುನಿಕ ತಂತ್ರಜ್ಞಾನದ ಮೂರು ಕೋಟಿ ರೂಪಾಯಿ ವೆಚ್ಚದ ಕಸ ವಿಲೇವಾರಿ ಘಟಕ ಕಾಮಗಾರಿ ಆರಂಭಗೊAಡಿದೆ.
ಕಳೆದ ಅನೇಕ ವರ್ಷಗಳಿಂದಲೂ ಸ್ಥಳೀಯರಿಗೆ ಹಳೆಯ ಕಸ ವಿಲೇವಾರಿ ಘಟಕ ಬಾರಿ ದುರ್ವಾಸನೆ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ರೋಗ ರುಜಿನಗಳು ಹರಡುತ್ತಿದ್ದವು. ಇದರಿಂದಾಗಿ ಗ್ರಾಮಸ್ಥರು ಅನೇಕ ಬಾರಿ ಕೂಡಿಗೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಮಾಡಿದ ಘಟನೆಗಳೂ ನಡೆದವು.
ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯರ್ವಧನ್ ಸೇರಿದಂತೆ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕ ಮತ್ತು ಸ್ಥಳೀಯ ರೈತರ ದೂರಿನ್ವಯ ಪಟ್ಟಣ ಪಂಚಾಯಿತಿ ಮಾಸಿಕ ಸಭೆಯಲ್ಲಿ ಚರ್ಚಿಸಿ ಸಮಗ್ರ ಯೋಜನೆಯನ್ನು ರೂಪಿಸಿ ಅದರ ಮೂಲಕ ಕ್ರಿಯಾ ಯೋಜನೆಯನ್ನು ತಯಾರಿಸಿ ಕಾಯ್ದಿರಿಸಿ ಕ್ರಿಯಾ ಯೋಜನೆಯನ್ನು ಕಾರ್ಯಗತಗೊಳಿಸಲು ಜಾಗದ ಸರ್ವೆ ನಡೆಸಿದರು. ಅದರ ಮೂಲಕ ನೂತನ ಆಧುನಿಕ ತಂತ್ರಜ್ಞಾನದ ಯಂತ್ರಗಳ ಅಳವಡಿಕೆ ಮತ್ತು ಘನ ತ್ಯಾಜ್ಯ ಮೂಲಕ ಸಾವಯವ ಗೊಬ್ಬರವನ್ನು ತಯಾರಿಸುವ ಯೋಜನೆಯ ಕಾಮಗಾರಿ ಇದೀಗ ಆರಂಭವಾಗಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ತಿಳಿಸಿದ್ದಾರೆ.
ಮೂರು ಕೋಟಿ ವೆಚ್ಚದ ಘಟಕದ ಮೂಲಕ ಸುವ್ಯವಸ್ಥಿತವಾಗಿ ಒಣ ಕಸ - ಹಸಿ ಕಸವನ್ನು ಬೇರ್ಪಡಿಸಲಾಗುವುದು. ಸ್ಥಳಕ್ಕೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷೆ ಸೇರಿದಂತೆ ಸದಸ್ಯರು, ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.