ಮುಖ್ಯಮಂತ್ರಿ ಭೇಟಿ-ನಿಗಮದ ಪ್ರವೇಶ

ಈ ನಡುವೆ ದಕ್ಷಿಣ ಕನ್ನಡದ ಖ್ಯಾತ ಶಿಲ್ಪಿ ಮುನಿಯಂಗಳ ಪ್ರಸಾದ್ ಅವರ ಮೂಲಕ ಮೊಣ್ಣಪ್ಪ ಅವರ ನೇತೃತ್ವದ ಜೀರ್ಣೋದ್ಧಾರ ಸಮಿತಿಯು ಆದ್ಯತೆಯಲ್ಲಿ ನೂತನ ಶಿಲಾಗರ್ಭಗುಡಿ ನಿರ್ಮಾಣದ ಮೂಲಕ ಕಾರ್ಯಾರಂಭ ಮಾಡುವ ಮುನ್ನ ಬಾಲಾಲಯ ಸ್ಥಾಪನೆಯಾಯಿತು. ಸಿಮೆಂಟ್ ರಹಿತ ಶಿಲಾ ಗರ್ಭಗುಡಿಯ ನಿರ್ಮಾಣಕ್ಕೆ ತಯಾರಾಯಿತು. ಆದರೆ ಅಂದಿನ ಸ್ಥಿತಿಯಲ್ಲಿ ಕೊಡಗಿನಲ್ಲಿ ಭಾರೀ ಮೊತ್ತದ ಹಣ ಸಂಗ್ರಹಿಸಿ ಜೀರ್ಣೋದ್ಧಾರ ಕಾರ್ಯ ನಡೆಸುವದು ಅತ್ಯಂತ ಕಠಿಣಕರವಾದುದು ಎಂದು ಸಮಿತಿಗೆ ಮನವರಿಕೆಯಾಯಿತು. ಹೇಗಿದ್ದರೂ ಕೊಡಗು ಏಕೀಕರಣ ರಂಗದ ವತಿಯಿಂದ ಮುಖ್ಯಮಂತ್ರಿಯವರಿಗೆ ಜೀರ್ಣೋದ್ಧಾರದ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಸಮಿತಿಯು ಸಭೆಯೊಂದನ್ನು ನಡೆಸಿ ಸರಕಾರವೇ ಜೀರ್ಣೋದ್ಧಾರ ಕಾರ್ಯ ನಡೆಸಲು ಕೋರುವಂತೆ ನಿರ್ಧರಿಸಲಾಯಿತು. ಸಾಮಾನ್ಯವಾಗಿ ಸರಕಾರದ ಮುಜರಾಯಿ ಸಮಿತಿ ಅಧೀನದ ದೇವಾಲಯಗಳನ್ನು ಸರಕಾರವೇ ಜೀರ್ಣೋದ್ಧಾರ ಮಾಡುವದರಿಂದ ಹಾಗೂ ಸಾರ್ವಜನಿಕವಾಗಿ ಭಾರೀ ಮೊತ್ತದ ಹಣ ಸಂಗ್ರಹಾತಿ ಕಷ್ಟಸಾಧ್ಯವಾದುದರಿಂದ ಮೊಣ್ಣಪ್ಪ ಅವರ ನೇತೃತ್ವದ ಜೀರ್ಣೋದ್ಧಾರ ಸಮಿತಿಯು ಆಗ ಮುಜರಾಯಿ ಸಚಿವರೂ ಆಗಿದ್ದ ಸುಮಾ ವಸಂತ್ ಅವರಲ್ಲಿ ಮನವಿ ಮಾಡಿ ಸರಕಾರವೇ ಜೀರ್ಣೋದ್ಧಾರ ಮಾಡುವ ಬಗ್ಗೆ ಕೋರಿಕೆಯಿಟ್ಟಿತು. ಆಗ ಎಂ.ಎA. ನಾಣಯ್ಯ ಹಾಗೂ ಟಿ. ಜಾನ್ ಅವರುಗಳೂ ಸಚಿವರುಗಳಾಗಿದ್ದರು. ಈ ಮೂವರು ಸಚಿವರ ನೇತೃತ್ವದಲ್ಲಿ ಹಾಗೂ ಸಚಿವೆ ಸುಮಾ ವಸಂತ್ ಅವರ ಕೋರಿಕೆ ಮೇರೆಗೆ ಮಾಜಿ ಸಚಿವರಾಗಿದ್ದ ಎಂ. ಸಿ. ನಾಣಯ್ಯ ಅವರ ಮುಂದಾಳತ್ವದಲ್ಲಿ ಜೀರ್ಣೋದ್ಧಾರ ಸಮಿತಿಯ ನಿಯೋಗವು ಬೆಂಗಳೂರಿಗೆ ತೆರಳಿ ಆಗಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿತು. ಆ ಸಂದರ್ಭ ಸಮಿತಿಯ ಪರವಾಗಿ ಎಂ. ಸಿ. ನಾಣಯ್ಯ ಅವರು ಕರ್ನಾಟಕ ಮತ್ತು ದೇಶದಲ್ಲಿ ಕಾವೇರಿಯ ಮಹತ್ವದ ಕುರಿತು ವಿವರವಾಗಿ ಮಾತನಾಡಿ ದರು. ಮಳೆಗಾಲದಲ್ಲಿ ಕೊಡಗಿನ ಜನರು ಸಂಕಷ್ಟ ಅನುಭವಿಸುತ್ತಾರೆ. ಆದರೆ, ಕಾವೇರಿ ಮೂಲಕ ರಾಜ್ಯಕ್ಕೆ, ಇತರ ರಾಜ್ಯಗಳಿಗೆ ಅತ್ಯಧಿಕ ಪ್ರಯೋಜನವಿದೆ, ಕಾವೇರಿಯ ಉಗಮ ಸ್ಥಾನ ಹಾಗೂ ಭಾಗಮಂಡಲ ಕ್ಷೇತ್ರಗಳ ಜೀರ್ಣೋದ್ಧಾರವನ್ನು ಸರಕಾರವೇ ಮಾಡಬೇಕಾದ ಜವಾಬ್ದಾರಿಕೆ ಕುರಿತು ಗಮನಕ್ಕೆ ತಂದರು. ತಕ್ಷಣವೇ ಮುಖ್ಯಮಂತ್ರಿ ಕೃಷ್ಣ ಅವರು ಅಂದಾಜು ರೂ. ೧೭ ಕೋಟಿ ಯೋಜನೆಗೆ ಸಮ್ಮತಿ ನೀಡಿ ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳ ಜೀರ್ಣೋದ್ಧಾರ ಕಾರ್ಯವನ್ನು ರಾಜ್ಯದ ಕಾವೇರಿ ನೀರಾವರಿ ನಿಗಮಕ್ಕೆ ಒಪ್ಪಿಸಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ತಿಮ್ಮೇಗೌಡ ಅವರು ತಕ್ಷಣವೇ ಪ್ರತಿಕ್ರಿಯಿಸಿ ಆ ಕಾವೇರಿ ಮಾತೆ ಕರ್ನಾಟಕದ ಜನತೆಯ ಜೀವನಾಡಿಯಾಗಿದ್ದು, ಈ ಯೋಜನೆಗೆ ಸರ್ವ ರೀತಿಯ ಸಹಕಾರದ ಭರವಸೆ ನೀಡಿದರು. ಆಗ ಕೊಡಗಿನ ತಲಕಾವೇರಿಯವರೇ ಆದ ರಾಜ್ಯ ಲೋಕೋಪಯೋಗಿ ನಿವೃತ್ತ ಇಂಜಿನಿಯರ್ ಟಿ. ಡಿ. ಮನಮೋಹನ್ ಅವರಿಗೆ ಜೀರ್ಣೋದ್ಧಾರ ಕಾರ್ಯದ ಮೇಲುಸ್ತುವಾರಿ ಮಾಡುವ ಜವಾಬ್ದಾರಿಕೆಯನ್ನು ಸರಕಾರ ನೀಡಿತು. ಲೋಕೋಪಯೋಗಿ ಇಲಾಖೆಯ ಮುಖ್ಯ ವಾಸ್ತು ಶಿಲ್ಪಿ ಉದಯ ಅವರಿಗೆ ಯೋಜನಾ ತಯಾರಿಕೆಯ ಹೊಣೆ ನೀಡಲಾಯಿತು. ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳ ಹಳೆ ದೇವಾಲಯಗಳಲ್ಲಿನ ವಿಗ್ರಹಗಳ ನಿರ್ವಹಣಾ ಜವಾಬ್ದಾರಿಕೆಯನ್ನು ಮುಜರಾಯಿ ಸಮಿತಿಗೆ ಈಗ ದಿವಂಗತರಾಗಿರುವ ಪದ್ಮನಾಭ ನೀಲೇಶ್ವರ ಹಿರಿಯ ತಂತ್ರಿಯವರ ಮೂಲಕ ನಿರ್ವಹಿಸುವ ಹೊಣೆ ನೀಡಲಾಯಿತು. ಈ ಸಂದರ್ಭ ಮೊಣ್ಣಪ್ಪ ನೇತೃತ್ವದ ಸಾರ್ವಜನಿಕ ಜೀರ್ಣೋದ್ಧಾರ ಸಮಿತಿಯನ್ನು ವಿಸರ್ಜಿಸಲಾಯಿತು. ಆದರೆ, ಅಧ್ಯಕ್ಷರಾಗಿದ್ದ ಮೊಣ್ಣಪ್ಪ ಅವರೊಂದಿಗೆ ಜೀರ್ಣೋದ್ಧಾರ ಸಂದರ್ಭ ನಿಗಮದ ಪ್ರಮುಖರು ಚರ್ಚಿಸುತ್ತಿರುವಂತೆಯೂ ಸೂಚಿಸಲಾಗಿತ್ತು. ಜೀರ್ಣೋದ್ಧಾರದ ಗುತ್ತಿಗೆಯನ್ನು ಮೂಲತಃ ಕುಶಾಲನಗರದವರಾದ ಸೋಮಶೇಖರ್ ಅವರಿಗೆ ಟೆಂಡರ್ ಮೂಲಕ ರಾಜ್ಯ ಕಾವೇರಿ ನೀರಾವರಿ ನಿಗಮವು ನೀಡಿತು.

ಪುನರ್ ಪ್ರತಿಷ್ಠಾಪನಾ ಸಮಿತಿ ರಚನೆ

ಮುಖ್ಯಮಂತ್ರಿ ಕೃಷ್ಣ ಅವರ ಬಳಿಕ ನೂತನ ಮುಖ್ಯಮಂತ್ರಿಯಾಗಿ ಧರಂಸಿAಗ್ ಅವರು ಅಧಿಕಾರ ವಹಿಸಿಕೊಂಡಾಗಲೂ ಜೀರ್ಣೋದ್ಧಾರ ಕಾರ್ಯ ಎಂದಿನAತೆ ಮುಂದುವರಿಯಿತು. ಅಲ್ಲಿಂದ ಪ್ರಾಥಮಿಕ ಹಂತದಲ್ಲಿ ೨೦೦೬ ರಲ್ಲಿ ತಲಕಾವೇರಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಬಹುತೇಕ ಮುಕ್ತಾಯಗೊಂಡಿತು. ಭಾಗಮಂಡಲದ ಜೀರ್ಣೋದ್ಧಾರ ಕಾರ್ಯಕ್ಕೂ ಮುನ್ನ ತಲಕಾವೇರಿಯ ಎಲ್ಲ ದೇವಾಲಯಗಳಲ್ಲಿ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ-ಬ್ರಹ್ಮಕಲಶವನ್ನು ನಡೆಸುವಂತೆಯೂ ಕಾವೇರಿ ಕುಂಡಿಕೆಯಲ್ಲಿಯೂ ಜೀರ್ಣೋದ್ಧಾರವಾಗಿದ್ದುದರಿಂದ ಶುದ್ಧ ಕಲಶ ನಡೆಸುವಂತೆಯೂ ನಿರ್ಧರಿಸಿತು. ಆಗ ರಾಜ್ಯ ಮುಜರಾಯಿ ಇಲಾಖೆಯು ಪುನರ್ ಪ್ರತಿಷ್ಠಾಪನೆಗೆ ಸರಕಾರದಿಂದ ಖರ್ಚು ಮಾಡಲು ಅವಕಾಶವಿಲ್ಲವೆಂದೂ, ಭಕ್ತಾದಿಗಳ ಮೂಲಕ ಹಣ ಸಂಗ್ರಹಿಸಿ ಆ ಕಾರ್ಯ ನಿರ್ವಹಿಸಬೇಕೆನ್ನುವ ಧೋರಣೆ ವ್ಯಕ್ತಪಡಿಸಿ ಅದಕ್ಕಾಗಿ ತಲಕಾವೇರಿ-ಭಾಗಮಂಡಲ ಪುನರ್ ಪ್ರತಿಷ್ಠಾಪನಾ ಸಮಿತಿಯನ್ನು ರಚಿಸಿತು. ಅದರ ಕಾರ್ಯಾಧ್ಯಕ್ಷರಾಗಿ ಮತ್ತೆ ಮಾತಂಡ ಮೊಣ್ಣಪ್ಪ ಅವರನ್ನು ಸರಕಾರ ನೇಮಿಸಿತು. ಕಾರ್ಯದರ್ಶಿಯಾಗಿ ನನ್ನನ್ನು ಹಾಗೂ ಖಜಾಂಚಿಯಾಗಿ ಮಾತಂಡ ಸುರೇಶ್ ಚಂಗಪ್ಪ ಅವರನ್ನು ನೇಮಿಸಿತು. ಅಧ್ಯಕ್ಷರಾಗಿ ಜಿಲ್ಲಾಧಿಕಾರಿಯವರನ್ನು (ಆಗ ಎಂ. ಕೆ. ಬಲದೇವಕೃಷ್ಣ) ನೇಮಿಸಿತು. ಗೌರವಾಧ್ಯಕ್ಷರುಗಳಾಗಿ ಆಗ ಉಪಸಭಾಪತಿ ಯಾಗಿದ್ದ ಹಾಗೂ ಕ್ಷೇತ್ರ ಶಾಸಕರಾಗಿದ್ದ ಕೆ. ಜಿ. ಬೋಪಯ್ಯ, ಶಾಸಕ ಎಂ. ಪಿ. ಅಪ್ಪಚ್ಚು ರಂಜನ್, ವಿಧಾನಪರಿಷತ್ ಸದಸ್ಯರುಗಳಾಗಿದ್ದ ಎಂ. ಸಿ. ನಾಣಯ್ಯ, ಹಾಗೂ ಎಸ್. ಜಿ. ಮೇದಪ್ಪ, ಗೌರವ ಸಲಹೆಗಾರರುಗಳಾಗಿ ಸಂಸದ ಡಿ. ವಿ. ಸದಾನಂದಗೌಡ, ಉಸ್ತುವಾರಿ ಸಚಿವ ರಾಗಿದ್ದ ಕೃಷ್ಣ ಜೆ. ಪಾಲೇಮಾರ್ ಇವರುಗಳನ್ನು ನೇಮಿಸಲಾಯಿತು. ನಿಧಿ ಸಮಿತಿ ಅಧ್ಯಕ್ಷರಾಗಿ ಕೆ. ಎಸ್. ದೇವಯ್ಯ, ನಿಧಿ ಸಮಿತಿ ಕಾರ್ಯಾಧ್ಯಕ್ಷರಾಗಿ ಸುಗುಣ ಮುತ್ತಣ್ಣ ಅವರನ್ನು ನೇಮಿಸಿತು. ವ್ಯವಸ್ಥಾಪಕರಾಗಿ ಎಸ್. ಎಸ್. ಸಂಪತ್‌ಕುಮಾರ್ ಅವರಿದ್ದರು. ಆಗ ಶ್ರೀ ಭಗಂಡೇಶ್ವರ-ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಟಿ. ಎಸ್. ನಾರಾಯಣಚಾರ್ ಅವರು ಕಾರ್ಯನಿರ್ವಹಿಸಿದ್ದರು. ಸಮಿತಿಯ ಕಾರ್ಯದರ್ಶಿಗಳಾಗಿ ಎಂ. ಪಿ. ಸುನಿಲ್ ಸುಬ್ರಮಣಿ, ಎ. ಪಿ. ವೀರರಾಜು, ಸಿ. ರಾಜಾ ನಂಜಪ್ಪ ಅವರುಗಳನ್ನು ನೇಮಿಸಲಾಗಿತ್ತು. ಉಪ ಸಮಿತಿ ಪ್ರಮುಖರುಗಳಾಗಿ ಕುದುಕುಳಿ ಜೆ. ಭರತ್, ಪಿ. ಎಂ. ರಾಜೀವ್, ಹೆಚ್. ಟಿ. ಅನಿಲ್, ರವೀಂದ್ರಕುಮಾರ್ ಹೆಬ್ಬಾರ್, ರಾಬಿನ್ ದೇವಯ್ಯ, ಕಳ್ಳಿಚಂಡ ವಿಷ್ಣುಕಾರ್ಯಪ್ಪ, ಬಿದ್ದಾಟಂಡ ಎಸ್. ತಮ್ಮಯ್ಯ, ಶಿವಪ್ರಸಾದ್, ಕೋಡಿ ಚಂದ್ರಶೇಖರ್ ಮೊದಲಾದವರನ್ನು ನೇಮಿಸಲಾಯಿತು. ಮತ್ತೋರ್ವ ಸಮಿತಿ ಪ್ರಮುಖರಾದ ಮಂಡೀರ ದೇವಿ ಪೂಣಚ್ಚ ಅವರು ಪವಿತ್ರ ಕುಂಡಿಕೆಯ ಶುದ್ಧ ಕಲಶ ವಿಧಿವಿಧಾನಗಳನ್ನು ನೆರವೇರಿಸಲು ತಮ್ಮ ಕುಟುಂಬ ಸಹಿತ ಸಹಕರಿಸಿದ್ದಾರೆ. ಅಲ್ಲದೆ, ಭಾಗಮಂಡಲ ದೇವಾಲಯ ಮಹಾದ್ವಾರಕ್ಕೆ ಅತ್ಯಂತ ವರ್ಣಾತ್ಮಕ ಬಾಗಿಲುಗಳನ್ನು ಸಿದ್ಧಪಡಿಸಿ ನೀಡಿದ್ದಾರೆ. ಬೆಂಗಳೂರು ಕೊಡವ ಸಮಾಜದ ಎಲ್ಲ ಸದಸ್ಯರುಗಳ ಸಹಕಾರ ದೊರಕಿದ್ದು, ಆಗ ಕಾರ್ಯದರ್ಶಿಯಾಗಿದ್ದ ಮಂಡೇಡ ರವಿ ಉತ್ತಪ್ಪ ಅವರು ತಮ್ಮ ಸದಸ್ಯರ ಉದಾರ ಧನ ಸಂಗ್ರಹಿಸಿ ನೀಡಿದ್ದರು. ಅಲ್ಲದೆ, ಬೆಂಗಳೂರಿನ ಬೇರೆರ ಶಂಭು ಅಯ್ಯಣ್ಣ (ಈಗ ದಿವಂಗತರು), ಮಲ್ಲೇಂಗಡ ಬೆಳ್ಯಪ್ಪ, ಸಜನ್ ಪೂವಯ್ಯ, ಕೊಡಂದೇರ ಪೂವಯ್ಯ, ಗೌಡ ಸಮಾಜದ ಅಮ್ಮವ್ವನ ವಾಸು ಮೊದಲಾದವರ ಸಹಕಾರ ಮರೆಯಲಾಗದು, ಸಮಿತಿಯ ಇನ್ನಿತರ ಗೌರವಾಧ್ಯಕ್ಷರುಗಳಾಗಿದ್ದ ಎಂ. ಸಿ. ನಾಣಯ್ಯ, ಎಸ್. ಜಿ. ಮೇದಪ್ಪ ಹಾಗೂ ಕಾರ್ಯದರ್ಶಿಗಳಾಗಿದ್ದ ಎಂ. ಪಿ. ಸುನಿಲ್ ಸುಬ್ರಮಣಿ, ಎ. ಪಿ. ವೀರರಾಜು, ಸಿ. ರಾಜಾ ನಂಜಪ್ಪ ಇವರುಗಳ ಸೇವೆಯೂ ಅವಿಸ್ಮರಣೀಯ. ಸಮಿತಿಯಲ್ಲಿ ಸೇವೆ ಸಲ್ಲಿಸಿದ ಇನ್ನಿತರ ಪ್ರಮುಖರುಗಳೆಂದರೆ ಸುಗುಣ ಮುತ್ತಣ್ಣ, ಕೆ.ಎಸ್. ದೇವಯ್ಯ, ಟಿ.ಪಿ. ರಮೇಶ್, ಬಿ. ಎಸ್. ತಮ್ಮಯ್ಯ, ಅನಿಲ್ ಹೆಚ್. ಟಿ., ಪಿ. ಎಸ್. ರಾಜೀವ್, ಕಳ್ಳಿಚಂಡ ವಿಷ್ಣು ಹಾಗೂ ಕೈ ಜೋಡಿಸಿದ್ದ ಚಿದ್ವಿಲಾಸ್ ಮತ್ತಿತರರು. ತಲಕಾವೇರಿಯಲ್ಲಿ ಪುನರ್‌ಪ್ರತಿಷ್ಠಾಪನಾ ಸಮಿತಿಯು ೨೦೦೬ ರ ಮೇ. ೧೫ ರಿಂದ ೨೦ ರವರೆಗೆ ಅಷ್ಟಬಂಧ, ಬ್ರಹ್ಮಕಲಶ ಧಾರ್ಮಿಕ ವಿಧಿವಿಧಾನಗಳನ್ನು ವಿಧ್ಯುಕ್ತವಾಗಿ ನೆರವೇರಿಸಿತು. ಎಲ್ಲ ಧಾರ್ಮಿಕ ಪ್ರಕ್ರಿಯೆಗಳನ್ನು ಕ್ಷೇತ್ರ ತಂತ್ರಿಯವರಾದ ಹಿರಿಯ ನೀಲೇಶ್ವರ ಪದ್ಮನಾಭ ತಂತ್ರಿ (ಈಗ ದಿವಂಗತರು) ನಡೆಸಿಕೊಟ್ಟರು.

ಭಾಗಮಂಡಲದಲ್ಲಿ ಪ್ರತಿಷ್ಠಾಪನೆ

ಅದಾದ ಬಳಿಕ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತು ಬಳಿಕ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಭಾಗಮಂಡಲದಲ್ಲಿ ಜೀರ್ಣೋದ್ಧಾರ ಕಾರ್ಯ ಮುಂದುವರಿಯಿತು ಶಾಸಕರುಗಳಾದ ಕೆ. ಜಿ. ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಅವರುಗಳ ಸಹಕಾರದಿಂದ ಸಕಾಲಕ್ಕೆ ಸರಕಾರದ ಹಣ ಬಿಡುಗಡೆಗೊಂಡಿತು. ೨೦೦೯ ರ ಏಪ್ರಿಲ್ ೨ ರಿಂದ ಏಪ್ರಿಲ್ ೧೫ ರವರೆಗೆ ಇದೇ ಪುನರ್ ಪ್ರತಿಷ್ಠಾಪನಾ ಸಮಿತಿಯಿಂದ ಭಾಗಮಂಡಲದ ಎಲ್ಲ ದೇವಾಲಯಗಳಲ್ಲಿ ಅಷ್ಟಬಂಧ, ಬ್ರಹ್ಮಕಲಶ ಮತ್ತು ಪುನರ್ ಪ್ರತಿಷ್ಠಾಪನಾ ಕಾರ್ಯ ನೆರವೇರಿತು. ಸಮಿತಿ ಮೂಲಕ ಸಾರ್ವಜನಿಕ ರಿಂದ ಸಂಗ್ರಹಿಸಿದ ಹಣದಲ್ಲಿ ಈ ಧಾರ್ಮಿಕ ಕಾರ್ಯಗಳಿಗೆ ವಿನಿಯೋಗ ವಾಗಿಯೂ ರೂ. ೨೩ ಲಕ್ಷಗಳಷ್ಟು ಉಳಿಕೆಯಾಗಿ ಆ ಹಣವನ್ನು ಆಗಿನ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಜಿಲ್ಲಾಧಿಕಾರಿಗಳ ಮೂಲಕ ಅನ್ನ ಛತ್ರ ನಿರ್ಮಾಣಕ್ಕೆಂದು ಹಸ್ತಾಂತರಿಸಲಾಯಿತು. ಇಷ್ಟೊಂದು ಹಣ ಸಂಗ್ರಹಾತಿಗೆ ಮುಖ್ಯವಾಗಿ ಸಹಕರಿಸಿದವರ ಪೈಕಿ ಶಾಸಕರುಗಳಾದ ಹಾಗೂ ಪುನರ್ ಪ್ರತಿಷ್ಠಾಪನಾ ಸಮಿತಿಯ ಗೌರವಾಧ್ಯಕ್ಷರುಗಳಾಗಿದ್ದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಕೂಡ ಸೇರಿದ್ದಾರೆ. ಸಮಿತಿಗೆ ತಾವೂ ಹೆಜ್ಜೆಯಿರಿಸಿ ಹಣ ಸಂಗ್ರಹಾತಿಯಲ್ಲಿ ಕೈ ಜೋಡಿಸಿದ್ದಾರೆ. ಸಮಿತಿ ಯಲ್ಲಿದ್ದ ಡಾ. ಸಣ್ಣುವಂಡ ಎಂ. ಕಾವೇರಪ್ಪ, ಕೆ.ಜೆ. ಭರತ್ ಹಾಗೂ ರಾಬಿನ್ ದೇವಯ್ಯ ಅವರುಗಳೂ ಹಣ ಸಂಗ್ರಹಾತಿಗೆ ಸಹಕರಿಸಿದ್ದಾರೆ. ಕೂಡಗು ಏಕೀಕರಣ ರಂಗದಿAದ ತಮ್ಮು ಪೂವಯ್ಯ ಅವರು ಆರ್ಥಿಕ ನೆರವು ಕಲ್ಪಿಸಿದ್ದಾರೆ.

- ಜಿ. ರಾಜೇಂದ್ರ, ಮಡಿಕೇರಿ.