ಕುಶಾಲನಗರ, ಫೆ. ೨೭: ಕುಶಾಲನಗರ ತಾಲೂಕು ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಸ್.ಡಿ.ಎಂ.ಸಿ. ಅಧ್ಯಕ್ಷರಿಗೆ ಮುಖ್ಯ ಶಿಕ್ಷಕರಿಗೆ ಮತ್ತು ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕೂಡಿಗೆ ಡಯಟ್‌ನ ಹಿರಿಯ ಉಪನ್ಯಾಸಕರಾದ ಕೃಷ್ಣಪ್ಪ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾದ ಡಯಟ್ ಉಪನ್ಯಾಸಕ ಧನಂಜಯ ಅವರು ಮಾತನಾಡಿ, ಶಿಕ್ಷಕರು, ಪೋಷಕರು ಮತ್ತು ಸಮುದಾಯದ ನಡುವೆ ಉತ್ತಮ ಅರ್ಥಬದ್ಧವಾದ ಸಂವಹನೆ ಇರಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ ಅವರು ವಹಿಸಿದ್ದರು. ವೇದಿಕೆಯಲ್ಲಿ ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ. ಬಸವರಾಜು, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಸೋಮಯ್ಯ, ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ವಸಂತ್ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಸದಸ್ಯೆ ಜ್ಯೋತಿ ಉಪಸ್ಥಿತರಿದ್ದರು.

ಶಿಕ್ಷಕಿ ಪುಷ್ಪಾವತಿ ಸ್ವಾಗತಿಸಿದರು. ಸಿಆರ್‌ಪಿ ಗಿರೀಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ರೂಪ ವಂದಿಸಿದರು. ನಂತರ ನಡೆದ ಸಮಾಲೋಚನಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕಿ ಪುಷ್ಪಾವತಿ ಮತ್ತು ರೂಪ ಅವರು ಎಸ್‌ಡಿಎಂಸಿ ರಚನೆ, ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕ್ಲಸ್ಟರ್ ಮಟ್ಟದ ೧೧ ಶಾಲೆಗಳ ಮುಖ್ಯ ಶಿಕ್ಷಕರು ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ೩೫ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಈ ಸಂದರ್ಭ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕ್ಯಾಲೆಂಡರನ್ನು ಬಿಡುಗಡೆ ಮಾಡಿದರು.