ಶಾಂತಿ ಮಾತುಕತೆಗೆ ಕೊನೆಗೂ ಸಿದ್ಧ ಎಂದ ಉಕ್ರೇನ್
ಕೀವ್, ಫೆ. ೨೭: ತನ್ನ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾದೊಂದಿಗೆ ಕೊನೆಗೂ ಉಕ್ರೇನ್ ಶಾಂತಿ ಮಾತುಕತೆ ನಡೆಸಲು ಒಪ್ಪಿಗೆ ನೀಡಿದೆ. ಕದನ ವಿರಾಮದ ಬಗ್ಗೆ ಮಾತುಕತೆ ನಡೆಸಲು ನಿರಾಕರಿಸುತ್ತಿದೆ ಎಂಬ ರಷ್ಯಾದ ಆರೋಪಗಳನ್ನು ಉಕ್ರೇನ್ ತಿರಸ್ಕರಿಸಿದ್ದು, ಸ್ವೀಕಾರಾರ್ಹವಲ್ಲದ ಷರತ್ತುಗಳನ್ನು ಹೊರತುಪಡಿಸಿ ಬೇಷರತ್ ಶಾಂತಿಮಾತುಕತೆಗೆ ತಾನು ಸಿದ್ಧ ಎಂದು ಘೋಷಣೆ ಮಾಡಿದೆ. ಉಕ್ರೇನ್ ವಾರ್ಸಾ, ಬ್ರಾಟಿಸ್ಲಾವಾ, ಬುಡಾಪೆಸ್ಟ್, ಇಸ್ತಾನ್ಬುಲ್ ಮತ್ತು ಬಾಕುಗಳನ್ನು ಯಾವುದೇ ಮಾತುಕತೆಗಳಿಗೆ ಸಂಭಾವ್ಯ ಪರ್ಯಾಯ ಸ್ಥಳಗಳಾಗಿ ಪ್ರಸ್ತಾಪಿಸಿದೆ.
ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಂಕ ಕಡಿತಕ್ಕೆ ವಿರೋಧ: ಹೆಚ್.ಡಿ. ದೇವೇಗೌಡ ಪತ್ರ
ಬೆಂಗಳೂರು, ಫೆ. ೨೭: ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗಳ ಭರ್ತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಪರೀಕ್ಷೆಗಳಲ್ಲಿ ಸಂದರ್ಶನದ ಅಂಕವನ್ನು ೨೫ಕ್ಕೆ ಕಡಿತಗೊಳಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ರಾಜ್ಯಸಭೆಯ ಜೆಡಿಎಸ್ ಸದಸ್ಯ ಎಚ್.ಡಿ. ದೇವೇಗೌಡ ವಿರೋಧಿಸಿದ್ದು, ಈ ಸಂಬAಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಕೆಪಿಎಸ್ಸಿ ಇತ್ತೀಚಿನ ದಿನಗಳಲ್ಲಿ ಬದಲಾವಣೆಯ ನೆಪದಲ್ಲಿ ಸರ್ವಸಮ್ಮತವಾದ ಮತ್ತು ಬಹುಕಾಲದಿಂದ ಅನುಸರಿಸುತ್ತಿರುವ ಪ್ರಮಾಣಿತ ಕಾರ್ಯವಿಧಾನಗಳಿಗೆ ವಿರುದ್ಧವಾಗಿ ಸಾಗುವಂತೆ ಕಂಡು ಬರುತ್ತಿದೆ. ಇಂತಹ ದೂರದೃಷ್ಟಿಯಿಲ್ಲದ ಬದಲಾವಣೆಗಳಿಂದ ಭವಿಷ್ಯದಲ್ಲಿ ಉತ್ತಮ ಮತ್ತು ಕಾರ್ಯದಕ್ಷತೆವುಳ್ಳ ಅಧಿಕಾರಿಗಳನ್ನು ಆಯ್ಕೆಮಾಡಲು ಕಷ್ಟವಾಗಬಹುದು ಎಂದು ಹೇಳಿದ್ದಾರೆ. ಆದರೆ, ಅಂತಹ ಬದಲಾವಣೆಗಳು ಸಮ್ಮತವಾಗಿರಬೇಕು ಮತ್ತು ಕೇಂದ್ರ ಲೋಕ ಸೇವಾ ಆಯೋಗದ ಮಾದರಿಯಲ್ಲೇ ಇರಬೇಕು. ಆಯೋಗದಲ್ಲಿ ದೀರ್ಘಕಾಲದಿಂದ ಜಾರಿಯಲ್ಲಿದ್ದ ಪ್ರಮಾಣಿತ ಕಾರ್ಯವಿಧಾನವನ್ನು ೨೦೨೦ರ ಜೂನ್ ೪ ರಂದು ಬದಲಾವಣೆ ಮಾಡಲಾಗಿತ್ತು. ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ೧೫೦ ರಿಂದ ೫೦ಕ್ಕೆ ಇಳಿಕೆ ಮಾಡಲಾಗಿತ್ತು. ಈಗ ಅದನ್ನು ೨೫ಕ್ಕೆ ಇಳಿಸುವ ತೀರ್ಮಾನ ಮಾಡಲಾಗಿದೆ. ಇಂತಹ ತೀರ್ಮಾನದಿಂದ ಗ್ರಾಮೀಣ ಪ್ರದೇಶದ ಸ್ಪರ್ಧಾ ಆಕಾಂಕ್ಷಿಗಳಿಗೆ ಸಮಸ್ಯೆ ಆಗಲಿದೆ ತಿಳಿಸಿದ್ದಾರೆ. ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ಕೆಪಿಎಸ್ಸಿ ಕುರಿತು ಸಾರ್ವಜನಿಕರಲ್ಲಿ ಗೌರವ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ. ಈ ಎಲ್ಲ ತೀರ್ಮಾನಗಳನ್ನು ಕೈಬಿಡಬೇಕು. ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲೇ ಮುಖ್ಯ ಪರೀಕ್ಷೆಯ ಅಂಕಗಳು ಮತ್ತು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ನಿಗದಿಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಮೇಕೆದಾಟು ಯೋಜನೆಗಾಗಿ ಮತ್ತೆ ಪಾದಯಾತ್ರೆ ಆರಂಭಿಸಿದ ಕಾಂಗ್ರೆಸ್
ಬೆAಗಳೂರು, ಫೆ. ೨೭: ಮೇಕೆದಾಟು ಅಣೆಕಟ್ಟೆ ನಿರ್ಮಾಣ ಯೋಜನೆಗೆ ಆಗ್ರಹಿಸಿ ನೀರಿಗಾಗಿ ನಡಿಗೆ ಹೆಸರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಎರಡನೇ ಹಂತದ ಪಾದಯಾತ್ರೆಗೆ ಭಾನುವಾರ ರಾಮನಗರದಲ್ಲಿ ಚಾಲನೆ ನೀಡಲಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕದಲ್ಲಿ ಈ ಕಾರ್ಯಕ್ರಮಕ್ಕಾಗಿ ಸಿದ್ಧಗೊಂಡಿದ್ದ ವೇದಿಕೆಯಲ್ಲಿ ವಂದೇ ಮಾತರಂ, ನಾಡಗೀತೆ, ರೈತಗೀತೆ ಮೂಲಕ ಕಾಂಗ್ರೆಸ್ ನಾಯಕರು ಪಾದಯಾತ್ರೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಹರಿಪ್ರಸಾದ್, ದೃವನಾರಾಯಣ್, ಕೆ.ಹೆಚ್. ಮುನಿಯಪ್ಪ, ಸಂಸದ ಡಿ.ಕೆ. ಸುರೇಶ್, ಚೆಲುವರಾಯಸ್ವಾಮಿ ಶಾಸಕರು, ಎಂಎಲ್ಸಿಗಳು ಸೇರಿದಂತೆ ಘಟಾನುಘಟಿ ನಾಯಕರು ಭಾಗಿಯಾಗಿದ್ದರು. ಅಲ್ಲದೆ ಚಿತ್ರನಟರಾದ ನೆನಪಿರಲಿ ಪ್ರೇಮ್, ಸಾಧು ಕೋಕಿಲ ಪಾದಯಾತ್ರೆಯಲ್ಲಿ ಭಾಗಿಯಾಗಿರುವುದು ಗಮನಸೆಳೆಯಿತು. ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಮೇಕೆದಾಟು ಯೋಜನೆಗೆ ಆಗ್ರಹಿಸಿ ಹೋರಾಟ ಮಾಡಲಾಗುತ್ತಿದೆ. ೫ ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ನಮ್ಮ ಅವಧಿಯಲ್ಲಿ ಡಿಪಿಆರ್ ಆಗಿತ್ತು. ಆದರೆ ಇಲ್ಲಿಯವರೆಗೆ ಯೋಜನೆ ಕಾರ್ಯಗತ ಮಾಡಿಲ್ಲ. ಅದಕ್ಕಾಗಿ ಈ ಪಾದಯಾತ್ರೆ ಮಾಡ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರಿಗೆ ಬಂದ ೧೨ ಮಂದಿ ಕನ್ನಡಿಗರ ಸ್ವಾಗತಿಸಿದ ಸಚಿವ ಆರ್. ಅಶೋಕ್
ಬೆಂಗಳೂರು, ಫೆ. ೨೭: ವಿದ್ಯಾಭ್ಯಾಸಕ್ಕೆಂದು ಉಕ್ರೇನ್ಗೆ ತೆರಳಿದ್ದ ಕರ್ನಾಟಕ ವಿದ್ಯಾರ್ಥಿಗಳ ಪೈಕಿ ೧೨ ಜನರು ಭಾನುವಾರ (ಫೆ.೨೭) ಬೆಂಗಳೂರಿಗೆ ಆಗಮಿಸಿದ್ದು, ರಾಜ್ಯಕ್ಕೆ ಆಗಮಿಸಿದ ೧೨ ಮಂದಿಯನ್ನು ಸಚಿವ ಆರ್. ಅಶೋಕ್ ಅವರು ಸ್ವಾಗತಿಸಿದರು. ಈ ವೇಳೆ ಸುದ್ದಿಗಾರರರೊಂದಿಗೆ ಮಾತನಾಡಿದ ಸಚಿವರು, "ದೆಹಲಿಯಿಂದ ಇನ್ನು ೧೮ ಜನರು ಆಗಮಿಸಲಿದ್ದಾರೆ. ರಾಜ್ಯ ಕಂದಾಯ ಇಲಾಖೆಯಿಂದ ಕರ್ನಾಟಕ ಭವನದಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ" ಎಂದು ಹೇಳಿದರು. "ಉಕ್ರೇನ್ನಿಂದ ಆಗಮಿಸಿದವರು ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬೆಂಗಳೂರಿಗೆ ಬರಲು ಅವರಿಗೆ ಟಿಕೆಟ್ ಬುಕ್ ಮಾಡಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆಯೂ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು. ನಗರಕ್ಕೆ ಬಂದಿಳಿದ ಶ್ರೇಯಾ ಎಂಬುವವರು ಮಾತನಾಡಿ, ತಾಯ್ನಾಡಿಗೆ ಬಂದಿಳಿದಿದ್ದು ಬಹಳ ಸಂತಸ ತಂದಿದೆ. ಆದರೆ, ನನ್ನ ಸ್ನೇಹಿತರಿನ್ನೂ ಉಕ್ರೇನ್ ನಲ್ಲಿಯೇ ಸಿಲುಕಿಕೊಂಡಿದ್ದಾರೆ. ಅಲ್ಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರವಾಗಿ ಹದಗೆಡುತ್ತಿದೆ ಎಂದು ಹೇಳಿದ್ದಾರೆ. ವಿಜಯಲಕ್ಷ್ಮೀ ಎಂಬುವವರು ಮಾತನಾಡಿ, ಇಲ್ಲಿಗೆ ಬಂದಿಳಿದಿದ್ದು ಬಹಳ ಸಂತೋಷವಾಗುತ್ತಿದೆ. ರಾಯಭಾರಿ ಕಚೇರಿ ತನ್ನಿಂದ ಸಾಧ್ಯವಾದ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತ ಸರ್ಕಾರ ಹಾಗೂ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆಂದು ತಿಳಿಸಿದ್ದಾರೆ.