
ವೀರಾಜಪೇಟೆ, ಫೆ. ೨೬: ಶ್ರೀನಗರದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಹುತಾತ್ಮರಾಗಿದ್ದ ಕೊಡಗಿನ ಯೋಧ ಅಲ್ತಾಫ್ ಅಹಮ್ಮದ್ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ವೀರಾಜಪೇಟೆ ನಗರದ ಈದ್ಗಾ ಮೈದಾನದ ಖಬರಸ್ತಾನದಲ್ಲಿ ಸಕಲ ಸರ್ಕಾರಿ ಹಾಗೂ ಸೇನಾ ಗೌರವಗಳೊಂದಿಗೆ ನೆರವೇರಿತು.ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ತಾ. ೨೩ ರಂದು ಶ್ರೀನಗರದಲ್ಲಿ ಕರ್ತವ್ಯ ನಿರತರಾಗಿದ್ದಲ್ಲೇ ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದರು. ಶ್ರೀನಗರದಲ್ಲಿ ವಿಪರೀತ ಹಿಮಪಾತವಾಗುತ್ತಿದ್ದರಿಂದ ಪ್ರತಿಕೂಲ ವಾತಾವರಣದಲ್ಲಿ ವಿಮಾನ ಹಾರಾಟ ಅಸಾಧ್ಯವಾಗಿದ್ದರಿಂದ ಮೂರು ದಿನ ತಡವಾಗಿ ಯೋಧ
(ಮೊದಲ ಪುಟದಿಂದ) ಅಲ್ತಾಫ್ ಅವರ ಪಾರ್ಥೀವ ಶರೀರ ತಾ. ೨೬ ರಂದು ಹುಟ್ಟೂರಿಗೆ ಆಗಮಿಸಿತು.
ರಾತ್ರಿ ಹುತಾತ್ಮ ಯೋಧ ಅಲ್ತಾಫ್ ಅವರ ಪಾರ್ಥೀವ ಶರೀರ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ತಲುಪಿದಾಗ ಕೆಪಿಸಿಸಿ ಕಾರ್ಯದರ್ಶಿ ಮೆಹ್ರೋಜ್ ಖಾನ್ ಸಕಲ ಸರ್ಕಾರಿ ಗೌರವಗಳೊಂದಿಗೆ ಪಾರ್ಥೀವ ಶರೀರವನ್ನು ಸ್ವೀಕರಿಸಿ ವೀರಾಜಪೇಟೆಗೆ ಕಳುಹಿಸಿಕೊಟ್ಟರು.
ತಿತಿಮತಿ ಗೇಟಿನಲ್ಲಿ ಬರಮಾಡಿಕೊಂಡ ಬಳಗ
ಶನಿವಾರ ಬೆಳಗ್ಗಿನ ಜಾವ ೫.೩೦ಕ್ಕೆ ತಿತಿಮತಿ ಗೇಟ್ ಬಳಿ ಅಲ್ತಾಫ್ ಪಾರ್ಥೀವ ಶರೀರ ಕೊಡಗಿನ ಗಡಿಯನ್ನು ಪ್ರವೇಶಿಸುವ ಸಮಯದಲ್ಲಿ “ವೀರ್ ಜವಾನ್ ಅಮರ್ ರಹೇ” ಘೋಷಣೆಯ ಜೊತೆಗೆ ಅವರ ಆಪ್ತ ಸ್ನೇಹಿತರ ಬಳಗ ಹುತಾತ್ಮನ ಪಾರ್ಥೀವ ಶರೀರವನ್ನು ಬರಮಾಡಿಕೊಂಡರು. ಬಳಿಕ ವೀರಾಜಪೇಟೆ ನಗರದೊಳಕ್ಕೆ ಸೇನಾ ವಾಹನ ಬರುವಾಗ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಸುಶ್ಮಿತಾ, ಮುಖ್ಯಾಧಿಕಾರಿ ಚಂದ್ರಕುಮಾರ್ ಹಾಗೂ ಪಟ್ಟಣ ಪಂಚಾಯತ್ ಸದಸ್ಯರು ಹೂಗುಚ್ಛ ಅರ್ಪಿಸುವ ಮೂಲಕ ಪಾರ್ಥೀವ ಶರೀರವನ್ನು ಬರಮಾಡಿಕೊಂಡರು.
ಜಿಲ್ಲಾಡಳಿತದಿAದ ಸಕಲ ಸಿದ್ಧತೆ
ದೇಶಕ್ಕಾಗಿ ಸೇವೆಗಯ್ಯುತ್ತಿರುವಾಗಲೇ ಹಿಮಪಾತಕ್ಕೆ ಬಲಿಯಾದ ಹೆಮ್ಮೆಯ ಸೈನಿಕ ಅಲ್ತಾಫ್ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ವೀರಾಜಪೇಟೆ ತಾಲೂಕು ಮೈದಾನದಲ್ಲಿ ಇರಿಸಲಾಯಿತು. ಕೊರೆಯುವ ಚಳಿಯಲ್ಲಿಯೇ ಜನಸಾಗರ ಹೆಮ್ಮೆಯ ಸೈನಿಕನನ್ನು ಕೊನೆಯ ಬಾರಿ ಕಣ್ತುಂಬಿಕೊಳ್ಳಲು, ತಮ್ಮ ಗೌರವ ನಮನ ಸಲ್ಲಿಸಲು ಸರತಿ ಸಾಲಿನಲ್ಲಿ ಬಂದರು. ತಮಗೆ ತೋಚಿದ ರೀತಿಯಲ್ಲಿ ಸೈನಿಕನಿಗೆ ಗೌರವ ವಿದಾಯವನ್ನು ಸಲ್ಲಿಸಿದರು.
ಗಣ್ಯರ ದಂಡು
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಸೈನಿಕರುಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಮೇಜರ್ ಡಾ.ಕುಶ್ವಂತ್ ಕೋಳಿಬೈಲ್ ಅಗಲಿದ ಹುತಾತ್ಮ ಯೋಧನಿಗೆ ತಮ್ಮ ಅಂತಿಮ ಗೌರವವನ್ನು ಸಲ್ಲಿಸಿದರು.
ಸರ್ಕಾರಿ-ಸೇನಾ ಗೌರವ
ರಾಜ್ಯ ಸರ್ಕಾರದ ವತಿಯಿಂದ ಸರ್ಕಾರಿ ಗೌರವ, ಕೊಡಗು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಬಿ.ಸಿ ಸತೀಶ್ ಅವರಿಂದ ಗೌರವ ಸಲ್ಲಿಕೆ, ಕೊಡಗು ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರು ಪೊಲೀಸ್ ಇಲಾಖೆಯ ಪರವಾಗಿ ಗೌರವ ಸಮರ್ಪಣೆ ಮಾಡಿದರು. ಹಲವಾರು ಸಂಘ-ಸAಸ್ಥೆಗಳು, ಅಲ್ತಾಫ್ ಅವರು ಶಿಕ್ಷಣ ಪಡೆದ ನಗರದ ಸಂತ ಅನ್ನಮ್ಮ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ವಿವಿಧ ಚರ್ಚಿನ ಧರ್ಮಗುರುಗಳು, ಮುಸ್ಲಿಂ ಧರ್ಮಗುರುಗಳು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಹುತಾತ್ಮ ಯೋಧನಿಗೆ ಗೌರವ ಸಮರ್ಪಣೆ ಮಾಡಿದರು.
ಬೆಳಿಗ್ಗೆ ಒಂಬತ್ತು ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ತಾಲೂಕು ಮೈದಾನದಲ್ಲಿ ಇರಿಸಲಾಗಿತ್ತು. ಬಳಿಕ ನಗರದ ಈದ್ಗಾ ಮೈದಾನಕ್ಕೆ ವಾಹನದ ಮೂಲಕ ಅಮರ್ ರಹೇ ಘೋಷಣೆ ಕೂಗುತ್ತಾ ಪಾರ್ಥೀವ ಶರೀರವನ್ನು ಕರೆತರಲಾಯಿತು. ಅಲ್ಲಿಯೂ ಸಾರ್ವಜನಿಕರು ದರ್ಶನಕ್ಕೆ ಮುಗಿಬಿದ್ದರು. ಸ್ಥಳ ಚಿಕ್ಕದಾಗಿ ಜನರಿಗೆ ಸ್ವಲ್ಪಮಟ್ಟಿಗಿನ ತೊಂದರೆಯೂ ಉಂಟಾಯಿತು. ಮುಸ್ಲಿಂ ಧರ್ಮದ ವಿಧಿ ವಿಧಾನದ ಪ್ರಕಾರ ಅಲ್ತಾಫ್ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಮಾಡಲಾಯಿತು.
ಸೇನೆಯ ವತಿಯಿಂದ ಅಲ್ತಾಫ್ ಅವರ ಪಾರ್ಥಿವ ಶರೀರದ ಮೇಲಿದ್ದ ಭಾರತದ ತ್ರಿವರ್ಣ ಧ್ವಜವನ್ನು ಸೇನೆಯ ಅಧಿಕಾರಿಗಳು ಅವರ ಪತ್ನಿಗೆ ಹಸ್ತಾಂತರ ಮಾಡಿದರು. ಬಳಿಕ ಸೇನೆಯ ಗೌರವಾರ್ಥವಾಗಿ ಮೂರು ಸುತ್ತು ಕುಶಾಲತೋಪು ಸಿಡಿಸಿ ಅಗಲಿದ ಯೋಧನಿಗೆ ಸೇನೆಯ ಗೌರವ ವಂದನೆಯನ್ನು ಸಲ್ಲಿಸಿದರು.
ಕುಟುಂಬಸ್ಥರ ಆಕ್ರಂದÀನ
ಯೋಧ ಅಲ್ತಾಫ್ಗೆ ಇನ್ನೂ ೩೭ ವರ್ಷವಷ್ಟೇ. ಚಿಕ್ಕ ವಯಸ್ಸಿನಲ್ಲೇ ಪ್ರೀತಿಯ ಪತಿಯನ್ನು ಕಳೆದುಕೊಂಡು ಕಂಗಾಲಾಗಿದ್ದ ಅವರ ಪತ್ನಿ ತಾಲೂಕು ಮೈದಾನದಲ್ಲಿ ಅಲ್ತಾಫ್ ಅವರ ದರ್ಶನಕ್ಕೆ ಅವಕಾಶ ಕೊಡುತ್ತಿದ್ದಂತೆಯೇ ಮೃತ ಪತಿಯ ಮುಖ ಕಂಡೊಡನೆ ಪ್ರಜ್ಞಾಹೀನರಾಗಿ ಅಲ್ಲಿಯೇ ಕುಸಿದು ಬಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಇನ್ನೂ ಅಲ್ತಾಫ್ ಅವರ ಮಗ ಮತ್ತು ಮಗಳು ಜಾಸ್ಮಿನ್ ಹಾಗೂ ಅಫ್ರಿದ್ ಅವರಂತೂ ಸೈನಿಕರು ತೊಡುವ ರೀತಿಯ ಬಟ್ಟೆಗಳನ್ನು ಧರಿಸಿ, ತಮ್ಮೊಳಗೂ ಪುಟಾಣಿ ಸೈನಿಕರಿದ್ದಾರೆ ಎನ್ನುವುದನ್ನು ಜನತೆಗೆ ತಿಳಿಸುವಂತೆ ಕಂಡು ಬಂದರು.
ಅಲ್ತಾಫ್ ಅವರ ತಾಯಿ, ಸಹೋದರಿಯರ ರೋಧನ ಮುಗಿಲು ಮುಟ್ಟಿತ್ತು. ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ಅಲ್ತಾಫ್ ಅವರ ಪತ್ನಿಗೆ ಹಸ್ತಾಂತರ ಮಾಡುವ ವೇಳೆಯಲ್ಲಿಯೂ ಮತ್ತೊಮ್ಮೆ ಅಲ್ತಾಫ್ ಪತ್ನಿ ಕುಸಿದು ಬಿದ್ದರು. ಸಂಬAಧಿಕರು ಉಪಚರಿಸಿದರು. ‘ತಮ್ಮ ಮುದ್ದಿನ ಅಪ್ಪ ಇನ್ನಿಲ್ಲ’ ಎನ್ನುವ ಸತ್ಯವನ್ನು ಅರ್ಥಮಾಡಿಕೊಳ್ಳಬಲ್ಲಷ್ಟು ದೊಡ್ಡವಳಾಗಿರುವ ೧೧ ವರ್ಷ ಪ್ರಾಯದ ಅಲ್ತಾಫ್ರ ಮಗಳು ಜಾಸ್ಮಿನ್ ‘ಮುಂದೆ ನೀನು ಏನಾಗ ಬಯಸುತ್ತೀಯಾ?’ ಎನ್ನುವ ಮಾದ್ಯಮದವರ ಪ್ರಶ್ನೆಗೆ ಆತ್ಮವಿಶ್ವಾಸದಿಂದ “ನಾನು ಅಪ್ಪನಂತೆ ಸೈನ್ಯಕ್ಕೆ ಸೇರಲು ಬಯಸುತ್ತೇನೆ” ಎಂದು ಹೇಳಿದ್ದು ಮಾತ್ರ ನೆರೆದಿದ್ದವರ ಪ್ರಶಂಸೆಗೆ ಪಾತ್ರವಾಯಿತು.
ಬೆಳಿಗ್ಗೆ ಹನ್ನೊಂದು ಗಂಟೆಯವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಎಂದು ಖುದ್ದು ಪಟ್ಟಣ ಪಂಚಾಯಿತಿ ಮೈಕ್ ಮೂಲಕ ನಗರದಲ್ಲಿ ಪ್ರಚಾರ ಮಾಡಿಸಿದ್ದರು. ಆದರೆ ಒಂಭತ್ತು ಗÀಂಟೆಗೆ ಅಲ್ಲಿಂದ ಈದ್ಗಾ ಮೈದಾನಕ್ಕೆ ಅಲ್ತಾಫ್ ಶರೀರವನ್ನು ತಂದಿದ್ದರಿAದ ಅಂತಿಮ ನಮನ ಸಲ್ಲಿಸಲು ಬಂದ ಜನತೆ ಕೆಲವರು ಗೊಂದಲಕ್ಕೆ ಈಡಾದರೂ. ‘ಛೇ ನೋಡಲಾಗಿಲ್ಲವಲ್ಲ’ ಎಂಬ ಬೇಸರ ಹಲವರು ವ್ಯಕ್ತಪಡಿಸಿದರು ಮತ್ತು ಕೆಲವು ಸಾರ್ವಜನಿಕರು ಇಷ್ಟೊಂದು ಅವಸರವೇತಕೆ, ಅಲ್ತಾಫ್ ದೇಶದ ಮಗ ನಾವೂ ನಮ್ಮ ಗೌರವ ಸಲ್ಲಿಸಬೇಕಾಗಿತ್ತು ಎಂದು ತಮ್ಮ ಅಸಮಾಧಾನ ಹೊರಹಾಕಿದರು. ಕೊನೆಘಳಿಗೆಯಲ್ಲಿ ನೋಡಲಾಗಲಿಲ್ಲವಲ್ಲ ಎಂಬ ಅಸಮಾಧಾನವನ್ನು ಹಲವರು ಹೊರಹಾಕಿದರು.
ಪಂಚಭೂತಗಳಲ್ಲಿ ಲೀನ
ಈದ್ಗಾ ಮೈದಾನದ ಬಳಿಯಿರುವ ಖಬರಸ್ತಾನದಲ್ಲಿ ಮುಸ್ಲಿಂ ಧರ್ಮದ ಸಂಪ್ರದಾಯದ ಪ್ರಕಾರ ಅವರ ವಿಧಿವಿಧಾನಗಳ ಮೂಲಕ ಹುತಾತ್ಮ ಯೋಧನ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣ ಪಂಚಾಯಿತಿ ಕೂಡಾ ಅಲ್ತಾಫ್ ಅವರ ಅಂತಿಮಯಾತ್ರೆÀ್ರಗೆ ಅಗತ್ಯ ತಯಾರಿ ಮಾಡಿಕೊಂಡಿತ್ತು. ತಹಶೀಲ್ದಾರ್ ಯೋಗಾನಂದ್ ಅವರು ತಾಲೂಕು ಆಡಳಿತದಿಂದ ಅಗತ್ಯವಾಗಿದ್ದ ಎಲ್ಲಾ ರೀತಿಯ ಸಿದ್ಧತೆಗಳನ್ನು ಖುದ್ದು ತಾವೇ ನಿಂತು ನೋಡಿಕೊಂಡರು.
