ಮಡಿಕೇರಿ, ಫೆ. ೨೬: ರೋಟರಿ ವತಿಯಿಂದ ಮಾ. ೧೧ ರಿಂದ ೧೩ರ ವರೆಗೆ ಮೈಸೂರಿನಲ್ಲಿ ಸ್ನೇಹ ಸಂಭ್ರಮ ರೋಟರಿ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ರಾಜ್ಯಪಾಲ ರೋ.ರವೀಂದ್ರ ಭಟ್ ತಿಳಿಸಿದರು.

ಮೂರು ದಿನಗಳ ಕಾಲ ನಡೆಯಲಿರುವ ಸಮಾವೇಶದಲ್ಲಿ ನಟ ರಮೇಶ್ ಅರವಿಂದ್, ದೊಡ್ಡಣ್ಣ, ಪ್ರಕಾಶ್ ಬೆಳವಾಡಿ, ರಾಕ್‌ಲೈನ್ ವೆಂಕಟೇಶ್, ಗಾಯಕ ಗುರುಕಿರಣ್ ಸೇರಿದಂತೆ ದೇಶದ ವಿವಿಧ ಭಾಗಗಳ ರೋಟರಿಯನ್‌ಗಳು ಭಾಗವಹಿಸಲಿದ್ದಾರೆ. ಜಿಲ್ಲೆಯ ಒಟ್ಟು ೨ ಸಾವಿರಕ್ಕೂ ಹೆಚ್ಚಿನ ರೋಟರಿ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಡಿಕೇರಿ ರೋಟರಿ ೧೯೫೦ನೇ ಇಸವಿಯಲ್ಲಿ ಆರಂಭಗೊAಡಿದ್ದು, ಕಳೆದ ೭೨ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದೆ. ಅಲ್ಲದೇ, ಮಡಿಕೇರಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ೫೦ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಮಸ್ತಕ ನೀಡಲಾಗಿದೆ. ಹಿಂದೂ ರುದ್ರಭೂಮಿಯ ೨ ಸಿಲಿಕಾನ್ ಚೇಂಬರ್‌ಗಳನ್ನು ರೂ.೫ ಲಕ್ಷ ದೇಣಿಗೆಯ ಮೂಲಕ ಸಾರ್ವಜನಿಕರ ಸೇವೆಗೆ ನೀಡಲಾಗಿದೆ. ಅಂಗವಿಕಲರ ಕುರ್ಚಿ, ಕಪಾಟುಗಳು, ಅಂಗವಿಕಲರ ಗಾಲಿಗೆ ಬೇಕಾದ ರಾಪ್ ಮತ್ತು ವಿದ್ಯುತ್‌ಶಕ್ತಿಯ ಸಾಮಗ್ರಿ ಮಡಿಕೇರಿಯ ಅಂಗವಿಕಲರ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ. ರಕ್ತದಾನ ಶಿಬಿರ, ಡಯಾಬಿಟಿಸ್ ಪರಿಶೀಲನಾ ಶಿಬಿರ, ಕೋವಿಡ್ - ೧೯ ಚುಚ್ಚುಮದ್ದಿನ ಶಿಬಿರ ಮತ್ತು ಅನೇಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಇನ್ನಿತರ ಹಲವಾರು ಕಾರ್ಯಕ್ರಮ ಮಾಡಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ರೋಟರಿಯನ್ ಎನ್.ಡಿ.ಅಚ್ಚಯ್ಯ, ಸಹಾಯಕ ಉಪರಾಜ್ಯಪಾಲ ಎಚ್.ಟಿ.ಅನಿಲ್, ವಲಯ ೬ರ ಕಾರ್ಯದರ್ಶಿ ಎಚ್.ಎಸ್.ವಂಸತ್ ಕುಮಾರ್, ಕಾರ್ಯದರ್ಶಿ ಲಲಿತ ರಾಘವನ್, ಉಪರಾಜ್ಯಪಾಲ ರತನ್ ತಮ್ಮಯ್ಯ ಉಪಸ್ಥಿತರಿದ್ದರು.