ಬೆಂಗಳೂರು, ಫೆ. ೨೫: ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಆಡಳಿತ ಮಂಡಳಿ ಹಾಗೂ ನಿರ್ದೇಶಕರ ಸ್ಥಾನಗಳಿಗೆ ತಾ. ೨೭ ರಂದು ಚುನಾವಣೆ ನಿಗದಿಗೊಂಡಿದೆ. ಕೊಡಗು ಸೇರಿದಂತೆ ಜಿಲ್ಲಾಮಟ್ಟದ ಸಂಘಗಳಿಗೂ ಈ ಸಂದರ್ಭ ಚುನಾವಣೆ ಏರ್ಪಟ್ಟಿದೆ. ಮತದಾನ ಪ್ರಕ್ರಿಯೆಗೆ ಪೂರ್ವಭಾವಿ ಸಿದ್ಧತೆ ನಡೆದಿದೆ. ಆದರೆ ಮತದಾನದ ದಿನವೇ ನಿಗದಿಗೊಂಡಿದ್ದ ಫಲಿತಾಂಶವನ್ನು ಮಾತ್ರ ಪ್ರಕಟಿಸಲು ಅಸಾಧ್ಯವಾಗಿದೆ.
ರಾಜ್ಯ ಉಚ್ಚನ್ಯಾಯಾಲಯದಲ್ಲಿ ರಾಜ್ಯ ಸಂಘದ ಪ್ರಸಕ್ತ ಕಾರ್ಯದರ್ಶಿಯಾಗಿರುವ ಬಂಗ್ಲೆ ಮಲ್ಲಿಕಾರ್ಜುನ ಹಾಗೂ ಇನ್ನಿತರ ಪತ್ರಕರ್ತರುಗಳಾದ ಅಮರ್‌ನಾಥ್ ಮತ್ತು ವಾಸುದೇವಹೊಳ್ಳ ಇವರುಗಳು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಪ್ರತಿವಾದಿಗಳನ್ನಾಗಿ ಈಗಾಗಲೇ ರಾಜ್ಯ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿರುವ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವ ಜಿ.ಸಿ. ಲೋಕೇಶ್, ರಾಜ್ಯ ಕಾರ್ಮಿಕ ಆಯುಕ್ತರು ಮತ್ತಿತರ ಅಧಿಕಾರಿಗಳು ಮತ್ತು ಪತ್ರಕರ್ತರು ಸೇರಿದಂತೆ ಒಟ್ಟು ಆರು ಮಂದಿಯನ್ನು ಪರಿಗಣಿಸಲಾಗಿದೆ. ರಿಟ್ ಅರ್ಜಿಯಲ್ಲಿ ಚುನಾವಣೆ ಸಂದರ್ಭದ ಕೆಲವು ನ್ಯೂನ್ಯತೆಗಳನ್ನು ಪ್ರಶ್ನಿಸಲಾಗಿದ್ದು, ವಾದವನ್ನು ಆಲಿಸಿದ ನ್ಯಾಯಾಧೀಶರಾದ ಕೃಷ್ಣ ದೀಕ್ಷಿತ್ ಅವರು ಚುನಾವಣೆ ನಡೆದರೂ ಕೂಡ ಯಾವುದೇ ಕಾರಣಕ್ಕೂ ಇಡೀ ರಾಜ್ಯದ ಚುನಾವಣಾ ಫಲಿತಾಂಶವನ್ನು ಮುಂದಿನ ಆದೇಶದವರೆಗೆ ಪ್ರಕಟಿಸದಂತೆ ತಡೆಯಾಜ್ಞೆ ನೀಡಿದ್ದಾರೆ.