ಶನಿವಾರಸಂತೆ, ಫೆ. ೨೫: ಪಟ್ಟಣದ ಜಾಮೀಯ ಮಸೀದಿಯಲ್ಲಿ ವಾರ್ಷಿಕ ಲೆಕ್ಕಾಚಾರ ಮಂಡನಾ ಸಭೆಯಲ್ಲಿ ಸಹೋದರರಿಬ್ಬರು ಹಾಗೂ ಮತ್ತಿಬ್ಬರು ತಮ್ಮ ಮೇಲೆ ಹಲ್ಲೆ ಮಾಡಿ ಕೊಲೆ ಮಾಡುವ ಬೆದರಿಕೆ ಹಾಕಿರುವುದಾಗಿ ವ್ಯಕ್ತಿಯೊಬ್ಬರು ಪೊಲೀಸ್ ದೂರು ನೀಡಿದ್ದಾರೆ.

ನಿವೃತ್ತ ಪೋಸ್ಟ್ಮನ್ ಅಬ್ದುಲ್ ರಜಾಕ್ ಹಲ್ಲೆಗೊಳಗಾದ ವ್ಯಕ್ತಿ. ಅಕ್ಮಲ್ ವಿಸಿಎಸ್, ಸಲಿಂ ವಿಸಿಎಸ್, ಪರ್ವೀಜ್, ನವಾಜ್ ಆರೋಪಿಗಳು. ಲೆಕ್ಕ ಮಂಡನೆ ಸಂದರ್ಭ ಅಕ್ಮಲ್ ವಿಸಿಎಸ್ ಮಸೀದಿಯಲ್ಲಿ ಏಕಾಏಕಿ ನುಗ್ಗಿ ಹಳೇ ದ್ವೇಷದ ಹಿನ್ನೆಲೆ ವಿನಾ ಕಾರಣ ಜಗಳ ತೆಗೆದಿದ್ದು, ಆತನ ಸಹೋದರ ಸಲೀಂ ವಿಸಿಎಸ್ ಹಾಗೂ ಪರ್ವೀಜ್ ಮತ್ತು ನವಾಜ್ ಹಲ್ಲೆ ಮಾಡಿದ್ದಾರೆ. ಅಲ್ಲಿದ್ದ ಜಮಾತಿನ ಸದಸ್ಯರು ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ ಎಂದು ಅಬ್ದುಲ್ ರಜಾಕ್ ದೂರಿನಲ್ಲಿ ತಿಳಿಸಿದ್ದಾರೆ.

ಅಬ್ದುಲ್ ರಜಾಕ್ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು, ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯ ಎಎಸ್‌ಐ ಶಿವಲಿಂಗ ಪ್ರಕರಣ ದಾಖಲಿಸಿದ್ದಾರೆ.