ಸಿದ್ದಾಪುರ, ಫೆ. ೨೫: ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ನದಿ ತೀರದ ಸಂತ್ರಸ್ತರಿಗೆ ಪುನರ್ವಸತಿ ಯೋಜನೆ ಮರೀಚಿಕೆಯಾಗಿದೆ. ಕಳೆದ ೩ ವರ್ಷಗಳ ಹಿಂದೆ ಕಾವೇರಿ ನದಿಯಲ್ಲಿ ಪ್ರವಾಹ ಏರಿಕೆಯಾಗಿ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕರಡಿಗೋಡು-ಗುಹ್ಯ ಗ್ರಾಮದಲ್ಲಿ ನೂರಾರು ಮನೆಗಳು ನೆಲಸಮಗೊಂಡಿತ್ತು. ಮನೆ ಕಳೆದುಕೊಂಡ ಹಲವಾರು ಕುಟುಂಬಗಳು ಕರಡಿಗೋಡಿನ ಸಮುದಾಯಭವನ ಹಾಗೂ ಮಸೀದಿ ಶಾಲೆಗಳಲ್ಲಿ ಕೆಲ ತಿಂಗಳು ಆಶ್ರಯ ಪಡೆದುಕೊಂಡರು. ನಂತರ ಪ್ರವಾಹ ಇಳಿಮುಖಗೊಂಡ ನಂತರ ತಾವು ಈ ಹಿಂದೆ ವಾಸ ಮಾಡಿಕೊಂಡಿದ್ದ ನದಿ ತೀರದಲ್ಲೇ ಪ್ಲಾಸ್ಟಿಕ್ ಹೊದಿಕೆಯ ಮೂಲಕ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ತಮ್ಮ ಸಂಸಾರದೊAದಿಗೆ ಜೀವನ ಸಾಗಿಸುತ್ತಿದ್ದಾರೆ. ಆದರೆ ವರ್ಷಂಪ್ರತಿ ಪ್ರವಾಹ ಸಂದರ್ಭದಲ್ಲಿ ಕರಡಿಗೋಡಿನ ನದಿ ತೀರದ ಬಹುತೇಕ ಮನೆಗಳು ಜಲಾವೃತ್ತಗೊಳ್ಳುತ್ತದೆ. ಪ್ರವಾಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕವಾಗಿ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸುತ್ತಾರೆ. ನಂತರ ಜನಪ್ರತಿನಿಧಿಗಳು ಭರವಸೆಗಳನ್ನು ನೀಡಿ ತೆರಳುತ್ತಾರೆ. ಪ್ರವಾಹದ ಸಂದರ್ಭದಲ್ಲಿ ಪರಿಹಾರ ಕೇಂದ್ರಗಳಿಗೆ ಈಗಿನ ಸರ್ಕಾರದ ಕಂದಾಯ ಸಚಿವ ಅಶೋಕ್, ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಇನ್ನಿತರ ಜನಪ್ರತಿನಿಧಿಗಳು ಭೇಟಿ ನೀಡಿದ್ದರು. ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ್ದರು. ಪುನರ್ವಸತಿಯ ಭರವಸೆಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಸಮೀಪದ ಬಿ. ಶೆಟ್ಟಿಗೇರಿಯಲ್ಲಿ ೧೦ ಎಕರೆ ಒತ್ತುವರಿ ಭೂಮಿಯನ್ನು ವಶಪಡೆದುಕೊಂಡಿತ್ತು. ನಂತರ ಆ ಜಾಗದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ಪುನರ್ವಸತಿ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಯಿತು. ಈ ಸಂಬAಧ ಜಿಲ್ಲಾ ಉಪವಿಭಾಗಾಧಿಕಾರಿ ಅವರ ಸಮ್ಮುಖದಲ್ಲಿ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ಸಂತ್ರಸ್ತರಿಗೆ ಸಿದ್ದಾಪುರ ಗ್ರಾ.ಪಂ. ಸಭಾಂಗಣದಲ್ಲಿ ಟೋಕನ್‌ಗಳನ್ನು ವಿತರಿಸಲು ಸಿದ್ಧತೆ ಕೈಗೊಂಡರು. ಆದರೆ ನೂರಾರು ಸಂತ್ರಸ್ತರು ತಮಗೆ ಬಿ. ಶೆಟ್ಟಿಗೇರಿಯಲ್ಲಿ ನಿವೇಶನಗಳು ಬೇಡವೆಂದು ನಿರಾಕರಿಸಿದರು. ತಮಗೆ ಸಿದ್ದಾಪುರ ವ್ಯಾಪ್ತಿಯಲ್ಲಿ ನಿವೇಶನ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದರು. ಬಿ. ಶೆಟ್ಟಿಗೇರಿ ಬಹಳ ದೂರವಾಗಿದ್ದು ಅಲ್ಲಿ ಕೂಲಿ ಕೆಲಸಗಳು ಕಡಿಮೆ ಇದ್ದು ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪುನರ್ವಸತಿ ನೀಡಬೇಕೆಂದು ಬಿಗಿಪಟ್ಟು ಹಿಡಿದರು. ಇದಾದ ನಂತರ ನದಿ ತೀರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸಂತ್ರಸ್ತರ ಹೋರಾಟ ಸಮಿತಿ ಮೂಲಕ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಬೃಹತ್ ಹೋರಾಟ ಮಾಡಲಾಯಿತು. ಆದರೆ ಈವರೆಗೂ ಸಿದ್ದಾಪುರದ ಸಂತ್ರಸ್ತ ಕುಟುಂಬಗಳಿಗೆ ನಿವೇಶನ ಲಭಿಸಲಿಲ್ಲ. ಸಂತ್ರಸ್ತರು ಸಂಕಷ್ಟದಲ್ಲೇ ದಿನ ದೂಡುತ್ತಿದ್ದಾರೆ. ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡಿದಲ್ಲದೇ ಕೆಲವರ ಮನೆಗಳ ಭಾಗಶಃ ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದೆ. ನದಿ ತೀರದ ನಿವಾಸಿಗಳು ಭಯದಿಂದಲೇ ದಿನದೂಡುತ್ತಿದ್ದಾರೆ. ಮನೆ ಕಳೆದುಕೊಂಡ ಕೆಲವು ಸಂತ್ರಸ್ತರು ಮುಂದೇನು ಮಾಡುವುದು ಎಂಬ ಚಿಂತೆಕಾಡುತ್ತಿದೆ. ಮುಂದಿನ ಎರಡು-ಮೂರು ತಿಂಗಳು ಕಳೆದರೆ ಮಳೆಗಾಲ ಆರಂಭವಾಗುತ್ತದೆ. ಮತ್ತೆ ಪ್ರವಾಹ ಬಂದಲ್ಲಿ ಮತ್ತೆ ಸಮಸ್ಯೆಗಳು ಆಗುವ ಸಾಧ್ಯತೆ ಇದೆ ಎಂದು ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಹಿಂದೆ ಮಾಲ್ದಾರೆ ಗ್ರಾ.ಪಂ.ಗೆ ಸೇರಿದ ಜಾಗವೊಂದನ್ನು ಗುರುತಿಸಿತ್ತು. ಆದರೆ ಇದೀಗ ಆ ಜಾಗವನ್ನು ಮಾಲ್ದಾರೆ ಹಾಗೂ ಸಿದ್ದಾಪುರ ಗ್ರಾ.ಪಂ.ಗೆ ಕಸವಿಲೇವಾರಿ ಘಟಕ ಮಾಡಲು ನೀಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಸಂತ್ರಸ್ತ ಎಂ.ಎ. ಕೃಷ್ಣ ಅಭಿಪ್ರಾಯಿಸಿದ್ದಾರೆ. ಪುನರ್ವಸತಿಗೆ ಸೂಕ್ತವಾದ ಜಾಗದಲ್ಲಿ ಸಂತ್ರಸ್ತರಿಗೆ ಗುರುತಿಸಿದ ಜಾಗವನ್ನು ಕಸವಿಲೇವಾರಿಗೆ ನೀಡಿ ಅನ್ಯಾಯ ಮಾಡಿದ್ದಾರೆಂದು ದೂರಿದರು. ಕೂಡಲೇ ಸಿದ್ದಾಪುರ ವ್ಯಾಪ್ತಿಯ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಬೇಕೆAದು ಮನವಿ ಮಾಡಿಕೊಂಡಿದ್ದಾರೆ.

- ಎ.ಎನ್. ವಾಸು