ಪೊನ್ನಂಪೇಟೆ, ಫೆ. ೨೪: ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತದ ವತಿಯಿಂದ ಸಂಘದ ಆವರಣದಲ್ಲಿ ೧ ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ನೂತನ ಗೊಬ್ಬರ ದಾಸ್ತಾನು ಘಟಕ ನಿರ್ಮಿಸಲಾಗಿದ್ದು, ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಚಿರಿಯಪಂಡ ಉತ್ತಪ್ಪ ಹಾಗೂ ಪೊನ್ನಂಪೇಟೆ ಎಪಿಸಿಎಂಎಸ್‌ನ ಮಾಜಿ ನಿರ್ದೇಶಕ ಹಾಗೂ ಹಿರಿಯ ಸಹಕಾರಿ ಪಟ್ರಂಗಡ ಎಂ. ಅಯ್ಯಪ್ಪ ಗೊಬ್ಬರ ಗೋದಾಮನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಪೊನ್ನಂಪೇಟೆ ಎಪಿಸಿಎಂಎಸ್ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ ಮಾತನಾಡಿ, ನೂತನ ಗೊಬ್ಬರ ದಾಸ್ತಾನು ಘಟಕ ನಿರ್ಮಾಣಕ್ಕೆ ತಾ. ೯.೨.೨೦೨೧ ರಂದು ಶಾಸಕ ಕೆ.ಜಿ. ಬೋಪಯ್ಯ ಶಿಲಾನ್ಯಾಸ ನೆರವೇರಿಸಿದ್ದರು. ನಮ್ಮ ಸಂಘದ ಸರ್ವ ಸದಸ್ಯರ ಸಹಕಾರದಿಂದ ಇಂದು ಕಟ್ಟಡ ಲೋಕಾರ್ಪಣೆಗೊಂಡಿದೆ. ಈ ಗೊಬ್ಬರ ದಾಸ್ತಾನು ಘಟಕ ೧ ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ೨೦ ಸಾವಿರ ಗೊಬ್ಬರ ಚೀಲಗಳನ್ನು ದಾಸ್ತಾನು ಇಡಬಹುದು. ಸಂಘದ ಸದಸ್ಯರು ಹಾಗೂ ಸಂಘದ ಕಾರ್ಯ ವ್ಯಾಪ್ತಿಗೆ ಸೇರಿರುವ ರೈತರು ಇದರ ಸದುಪಯೋಗವನ್ನು ಪಡೆದುಕೊಂಡು, ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.

ಮುಂದಿನ ದಿನಗಳಲ್ಲಿ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಸಮೀಪ ಇರುವ ಸಂಘದ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಮೋಹನ್, ಪೊನ್ನಂಪೇಟೆ ತಹಶೀಲ್ದಾರ್ ವಿ. ಪ್ರಶಾಂತ್ ಕುಮಾರ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐ.ಕೆ. ಮಂದಣ್ಣ, ಪೊನ್ನಂಪೇಟೆ ನಾಗರಿಕ ವೇದಿಕೆಯ ಸದಸ್ಯರಾದ ಅಪ್ಪಚ್ಚು, ಕುಶಾಲಪ್ಪ, ಸಂಘದ ಉಪಾಧ್ಯಕ್ಷ ಪದಾರ್ಥಿ ಎಸ್. ಮಂಜುನಾಥ್, ನಿರ್ದೇಶಕರುಗಳಾದ ಮುದ್ದಿಯಡ ಎ. ಸೋಮಯ್ಯ, ಚೋಡುಮಾಡ ಪಿ. ಶ್ಯಾಮ್, ಐನಂಡ ಕೆ. ಬೋಪಣ್ಣ, ಮಾಚಂಗಡ ಬಿ. ಮೊಣ್ಣಪ್ಪ, ಬೊಟ್ಟಂಗಡ ಎಸ್. ದಶಮಿ ದೇಚಮ್ಮ, ಮೂಕಳೇರ ಪಿ. ಶಾರದ, ಬಿ.ಎಸ್. ಚಂದ್ರಶೇಖರ್, ಪುತ್ತಾಮನೆ ದೇವದಾಸ್ ಜೀವನ್, ಹೆಚ್.ಹೆಚ್. ತಮ್ಮಯ್ಯ, ಹಾಲುಮತದ ಎಂ. ಡಿಕ್ಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಟಿ. ಪೂನಂ, ಪೊನ್ನಂಪೇಟೆ ಎಪಿಸಿಎಂಎಸ್ ಕಾರ್ಯ ವ್ಯಾಪ್ತಿಗೆ ಬರುವ ಎಲ್ಲಾ ಸಹಕಾರ ಸಂಘದ ಅಧ್ಯಕ್ಷರು, ಸದಸ್ಯರು, ನಾಗರಿಕರು ಹಾಜರಿದ್ದರು.