ಗೋಣಿಕೊಪ್ಪಲು, ಫೆ. ೨೪: ಆನೆ-ಮಾನವ ಸಂಘರ್ಷವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ತಿತಿಮತಿ ಅರಣ್ಯ ಉಪವಿಭಾಗದ ಎಸಿಎಫ್ ಉತ್ತಪ್ಪ ನೇತೃತ್ವದಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯ ಬಿರುಸಿನಿಂದ ಸಾಗಿದೆ.

ಪಾಲಿಬೆಟ್ಟ ಸಮೀಪದ ಅಬ್ಬೂರು ಬಳಿ ಆನೆ ಕಾರ್ಯಾಚರಣೆ ತಂಡ ಬೀಡುಬಿಟ್ಟಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಗರಿಕರ ಜೀವ ಹಾನಿ ಹಾಗೂ ಬೆಳೆ ಹಾನಿಯನ್ನು ತಪ್ಪಿಸಲು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಸರ್ಕಾರ ಮುಂದಾಗಿದೆ.

ಮೊದಲ ಹಂತದಲ್ಲಿ ಆರು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದ್ದು, ಮುಂದೆಯೂ ಕಾಲರ್ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ನೇತೃತ್ವ ವಹಿಸಿರುವ ಎಸಿಎಫ್ ಉತ್ತಪ್ಪ ಮಾಹಿತಿ ಒದಗಿಸಿದರು.

ಇಪ್ಪತ್ತಕ್ಕೂ ಅಧಿಕ ಸಂಖ್ಯೆಯಲ್ಲಿ ಒಂದು ತಂಡವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುವ ಕಾಡಾನೆಗಳ ಹಿಂಡನ್ನು ಗುರುತಿಸುವ ಅರಣ್ಯ ಸಿಬ್ಬಂದಿಗಳು ಆ ತಂಡದ ನಿರ್ವಹಣೆ ವಹಿಸುವ ಹೆಣ್ಣಾನೆಗಳಾದ ಅನನ್ಯ, ಉಷಾ ಹಾಗೂ ಆಕಾಂಕ್ಷ ಎಂಬ ಕಾಡಾನೆಗಳು ಹಾಗೂ ಒಂಟಿಯಾಗಿ ಅರಣ್ಯದಲ್ಲಿ ಸಂಚಾರ ಮಾಡುತ್ತಿದ್ದ ಅಯ್ಯಪ್ಪ ಎಂಬ ಗಂಡಾನೆ ಹಾಗೂ ಮಖ್ನಾ ಎಂಬ ಆನೆಯನ್ನು ಗುಂಪಿನಿAದ ಬೇರ್ಪಡಿಸಿ ಇವುಗಳಿಗೆ ಅರಿವಳಿಕೆಯನ್ನು ನೀಡುವ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಜರ್ಮನ್ ದೇಶದ ರೇಡಿಯೋ ಕಾಲರ್ ಅಳವಡಿಸಲಾಗಿದೆ.

ಪ್ರತಿ ರೇಡಿಯೋ ಕಾಲರ್‌ಗೆ ಮೂರರಿಂದ ನಾಲ್ಕು ಲಕ್ಷ ವೆಚ್ಚವಾಗುತ್ತಿದ್ದು, ಕನಿಷ್ಟ ನಾಲ್ಕು ವರ್ಷಗಳ ಕಾಲ ಇದು ತನ್ನ ಕೆಲಸ ನಿರ್ವಹಣೆ ಮಾಡುವುದಾಗಿ ವನ್ಯಜೀವಿ ವಿಭಾಗದ ವೈದ್ಯರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಕರ್ನಾಟಕ ಅರಣ್ಯ ಇಲಾಖೆ, ಭಾರತೀಯ ವನ್ಯಜೀವಿ ಸಂರಕ್ಷಣಾ ಸಂಸ್ಥೆ ಹಾಗೂ ಜಿಐಎಲ್ ಜರ್ಮನ್ ಇವರ ಸಹಯೋಗದೊಂದಿಗೆ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ನಡೆಯುತ್ತಿದೆ.

ಮತ್ತಿಗೋಡು ಹಾಗೂ ದುಬಾರೆ ಸಾಕಾನೆಗಳ ಶಿಬಿರದ ಅಭಿಮನ್ಯು ಹಾಗೂ ಮಹೇಂದ್ರ ಧನಂಜಯ ಹಾಗೂ ಸುಗ್ರೀವ ಎಂಬ ಆನೆಗಳು ಕಾಡು ಮೇಡುಗಳನ್ನು ಲೆಕ್ಕಿಸದೆ ಸಂಚರಿಸಿ ಕಾಡಾನೆಗಳನ್ನು ಪತ್ತೆಹಚ್ಚುತ್ತಿವೆ, ಆನೆಗಳ ನಿರ್ವಹಣೆ ಹೊತ್ತಿರುವ ಆನೆ ಮಾವುತರು, ಕಾವಾಡಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ. ಸಾಕಾನೆಗಳ ಸಹಾಯ ಪಡೆಯುವ ವೈದ್ಯರು ಕಾಡಾನೆಗಳ ಮೇಲೆ ಅರಿವಳಿಕೆ ಪ್ರಯೋಗಿಸಿ ಅವುಗಳನ್ನು ಪ್ರಜ್ಞೆ ತಪ್ಪಿಸಿ ಸುಮಾರು ಒಂದು ಗಂಟೆಯ ಒಳಗೆ ಕಾರ್ಯಾಚರಣೆ ಮುಗಿಸುತ್ತಾರೆ.

ತಿತಿಮತಿ ಅರಣ್ಯ ವಲಯದ ಉಪವಿಭಾಗದಲ್ಲಿ ನಾಗರಿಕರನ್ನು ಭಯಭೀತರನ್ನಾಗಿ ಮಾಡುತ್ತಿದ್ದ ಆರು ಕಾಡಾನೆಗಳನ್ನು ಪತ್ತೆಹಚ್ಚಿದ ನುರಿತ ವೈದ್ಯರ ತಂಡ ಇವುಗಳನ್ನು ಬೆನ್ನಟ್ಟಿ ರೇಡಿಯೋ ಕಾಲರ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಮುಖವಾಗಿ ಪಾಲಿಬೆಟ್ಟ ಸಮೀಪದ ಅಬ್ಬೂರು, ತಾರಿಕಟ್ಟೆ, ಹೊಸಳ್ಳಿ, ದೇವರಪುರದ, ದೇವರಕಾಡು ಹಾಗೂ ಹೆಬ್ಬಾಲೆ ಭಾಗದಲ್ಲಿದ್ದ ಕಾಡಾನೆಗಳನ್ನು ಗುರುತಿಸಲಾಗಿದೆ.

ರೇಡಿಯೋ ಕಾಲರ್ ಅಳವಡಿಸಿದ ಕಾಡಾನೆಗಳಿಗೆ ಅನನ್ಯ, ಉಷಾ ಹಾಗೂ ಆಕಾಂಕ್ಷ ಎಂದು ಹೆಸರಿಡಲಾಗಿದೆ. ಇನ್ನುಳಿದ ಎರಡು ಕಾಡಾನೆಗಳಿಗೆ ಅಯ್ಯಪ್ಪ ಹಾಗೂ ಮಖ್ನಾ ಎಂದು ನಾಮಕರಣ ಮಾಡಲಾಗಿದೆ. ತಿತಿಮತಿ ಉಪವಿಭಾಗದ ಎಸಿಎಫ್ ಪಂದಿಯAಡ ಉತ್ತಪ್ಪ ಹಾಗೂ ವನ್ಯಜೀವಿ ವಿಭಾಗದ ಡಾ. ಸನತ್ ಮುಳಿಯ, ಡಾ. ಸಿ.ಕೆ. ತಮ್ಮಯ್ಯ, ತಿತಿಮತಿ ಆರ್.ಎಫ್.ಒ. ಅಶೋಕ್ ಹುನಗುಂದ, ಡಿ.ಆರ್.ಎಫ್.ಒ. ಉಮಾಶಂಕರ್ ಹಾಗೂ ೪೦ ಸಿಬ್ಬಂದಿಗಳು ಐದು ದಿನಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ರೇಡಿಯೋ ಕಾಲರ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಡಗು ಸಿಸಿಎಫ್ ಡಾ. ಶಂಕರ್ ನಿರ್ದೇಶನ ಮೇರೆ ಕಾರ್ಯಾಚರಣೆಗಿಳಿದ ತಂಡದಲ್ಲಿ ವೀರಾಜಪೇಟೆಯ ಎ.ಸಿ.ಎಫ್. ರೋಶ್ನಿ, ಡಾ. ರಮೇಶ್, ನಿವೃತ್ತ ಡಿಸಿಎಫ್ ಎಂ. ಜಯ ಡಾ. ನವನೀತ್ ಇದ್ದರು.

- ಹೆಚ್.ಕೆ. ಜಗದೀಶ್