ಕಣಿವೆ, ಫೆ. ೨೫: ಬೇಸಿಗೆಯ ದಿನಗಳು ಆರಂಭವಾಗುತ್ತಿರುವAತೆ ಬಿಸಿಲಿನ ತಾಪಮಾನ ಏರುತ್ತಿದೆ. ಹಾಗಾಗಿ ಹಾರಂಗಿ ಒಡಲಲ್ಲಿ ಇರುವ ತೋಟಗಾರಿಕಾ ಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳ ಹಿಂದಷ್ಟೇ ನೆಟ್ಟಿದ್ದ ಸುಮಾರು ೨೦ ಎಕರೆ ವಿಸ್ತೀರ್ಣದ ಪೈಕಿ ಕೆಲವೊಂದು ಎಕರೆ ಭೂಮಿಯಲ್ಲಿ ನೆಟ್ಟಿದ್ದ ತೆಂಗಿನ ಗಿಡಗಳು ಬಿಸಿಲಿನ ತಾಪಕ್ಕೆ ಸಿಲುಕಿ ಒಣಗುತ್ತಿವೆ.

ಸರ್ಕಾರ ನೀಡುವ ಲಕ್ಷಾಂತರ ರೂಪಾಯಿಗಳ ಅನುದಾನದಲ್ಲಿ ತೆಂಗಿನ ಕಾಯಿ ಬಿತ್ತನೆ ಮಾಡಿ ವರ್ಷಗಳ ಬಳಿಕ ಅವುಗಳನ್ನು ಕಿತ್ತು ಬೇರೆಡೆ ನೆಟ್ಟು ಬೆಳಸುವಾಗ ಕನಿಷ್ಟ ಒಂದೆರಡು ವರ್ಷಗಳ ಕಾಲ ಆರೈಕೆ ಮಾಡಬೇಕಾಗುತ್ತದೆ. ಆದರೆ ಈ ತೋಟಗಾರಿಕೆ ಕ್ಷೇತ್ರದಲ್ಲಿ ನಿರ್ವಹಣೆಯ ಕೊರತೆಯಿಂದ ತೆಂಗಿನ ಗಿಡಗಳು ಒಣಗುತ್ತಿವೆ ಎಂದು ಕೆಲವು ಕೃಷಿಕರು ಆಪಾದಿಸಿದ್ದಾರೆ.

ಈ ಬಗ್ಗೆ ಹಾರಂಗಿ ತೋಟಗಾರಿಕೆ ಇಲಾಖೆಯ ಅಧಿಕಾರಿ ವರದರಾಜು ಅವರಲ್ಲಿ ಮಾಹಿತಿ ಬಯಸಿದಾಗ, ತೋಟಗಾರಿಕಾ ಕ್ಷೇತ್ರದ ಸುಮಾರು ೧೦೦ ಎಕರೆ ವಿಸ್ತೀರ್ಣದಲ್ಲಿ ಪ್ರತ್ಯೇಕವಾಗಿ ತೆಂಗು, ಸಪೋಟ, ಕಿತ್ತಳೆ, ಮಾವು, ಬೆಣ್ಣೆ ಹಣ್ಣು ಮೊದಲಾದ ಗಿಡಗಳನ್ನು ನೆಟ್ಟು ತೋಟವಾಗಿ ಪರಿವರ್ತಿಸಲಾಗುತ್ತಿದೆ.

ಅಲ್ಲದೇ ಐದು ಕಡೆ ಕೊಳವೆ ಬಾವಿಯನ್ನು ತೆರೆಯಲಾಗಿದ್ದು ಎಲ್ಲಾ ಗಿಡಗಳಿಗೂ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೆಯೇ ದಿನಗೂಲಿ ಕಾರ್ಮಿಕರ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಕಳೆದ ವರ್ಷ ತೆಂಗಿನ ಗಿಡಗಳನ್ನು ನೆಡುವ ಸಂದರ್ಭ ಮಳೆಯ ಪ್ರಮಾಣ ಜಾಸ್ತಿಯಾಗಿ ಕೆಲವೊಂದು ಗಿಡಗಳ ಗರಿಗಳು ಒಣಗಿದ್ದವು. ಆದರೆ ಗಿಡಗಳ ಕುಡಿಗಳು ಹಾಗೆಯೇ ಹಸಿರಾಗಿದ್ದು ಭೂಮಿಯ ಒಳಗೆ ಬೇರು ಬಿಡುತ್ತಿವೆ ಎನ್ನುತ್ತಾರೆ.

ಆದರೆ ಏನೇ ಇರಲಿ, ತೆಂಗಿನ ಗಿಡಗಳನ್ನು ಬೆಳೆಸುವ ಸಂದರ್ಭದ ಆರಂಭದ ನಾಲ್ಕಾರು ವರ್ಷಗಳು ಬೆಳೆಗಾರ ನೀಡುವ ನೀರು, ತೋರುವ ಬದ್ಧತೆ ಹಾಗೂ ಆರೈಕೆ, ಮುಂದಿನ ಐದಾರು ವರ್ಷಗಳ ಬಳಿಕ ಯಾರ ಹಂಗೂ ಇಲ್ಲದೇ ಬೆಳೆದವನ ಕಾಲು ಬುಡಕ್ಕೆ ಫಲ ಕೊಟ್ಟು ಆತನಿಗೆ ನಿಮ್ಮದಿಯ ನಿಟ್ಟುಸಿರು ನೀಡುವ ಕಾಮಧೇನು ತೆಂಗಿನ ಆರೈಕೆಗೆ ಇಲಾಖೆಯ ಅಧಿಕಾರಿಗಳು ನೈಜವಾದ ಬದ್ಧತೆ ಹಾಗೂ ಕಾಳಜಿ ತೋರಬೇಕಿದೆ ಅಷ್ಟೆ.

( ವರದಿ - ಕೆ.ಎಸ್. ಮೂರ್ತಿ )