ನಾಪೋಕ್ಲು, ಫೆ. ೨೩: ನಾಲಡಿ ಗ್ರಾಮದ ಬೈನಪಾರೆ, ಬೋನಿಕರೆ, ಕರ್ತಕಾಡು ಪ್ರದೇಶಗಳ ಬೆಟ್ಟಗಳಲ್ಲಿ ಕಾಣಿಸಿಕೊಂಡ ಬೆಂಕಿ ಈಗ ಹತೋಟಿಯಲ್ಲಿದ್ದು, ಅಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಹೊಗೆಯಾಡುತ್ತಿರುವದು ಕಂಡು ಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿಗೆ ಅಗ್ನಿಶಾಮಕ ದಳವಾಗಲಿ, ಮನುಷ್ಯರಾಗಲಿ ಹೋಗಿ ನಂದಿಸಲು ಸಾಧ್ಯವಿಲ್ಲದ ಕಾರಣ ಬೆಂಕಿಗೆ ಸುಮಾರು ೧೦೦ ಎಕರೆಗಳಷ್ಟು ಕುರುಚಲು ಕಾಡುಗಳು ಆಹುತಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಪ್ರದೇಶಗಳಲ್ಲಿ ತಲೆತಲಾಂತರಗಳಿAದ ಬೇಸಿಗೆ ಕಾಲದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಪ್ರಕೃತಿಯೇ ಇದನ್ನು ನಂದಿಸುವ ಕಾರ್ಯವನ್ನು ಕೈಗೊಳ್ಳುತ್ತದೆ. ಈ ಬೆಂಕಿ ದಟ್ಟ ಅರಣ್ಯಗಳಿಗೆ ಹರಡುವುದಿಲ್ಲ. ಬೆಂಕಿಗೆ ಆಹುತಿಯಾದ ಪ್ರದೇಶಗಳು ಮೊದಲ ಮಳೆ ಸುರಿದ ತಕ್ಷಣವೇ ಹಚ್ಚಹಸಿರಾಗಿ ಕಂಗೊಳಿಸುತ್ತವೆ ಎಂದು ನಾಲಡಿ ಗ್ರಾಮದ ಮಡಿಕೇರಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ‘ಶಕ್ತಿ’ಗೆ ತಿಳಿಸಿದ್ದಾರೆ.