ಮಡಿಕೇರಿ, ಫೆ.೨೪ : ನಗರದ ಇಂದಿರಾ ಕ್ಯಾಂಟೀನ್ ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಅಲ್ಲಿನ ಅವ್ಯವಸ್ಥೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಂದಿರಾ ಕ್ಯಾಂಟೀನ್‌ನ ಆಹಾರ ಸಿದ್ಧಪಡಿಸುವ ಕೋಣೆ, ಆಹಾರ ದಾಸ್ತಾನು ಕೊಠಡಿಗೆ ಭೇಟಿ ನೀಡಿ ದಿನಸಿ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಿದರು. ಕೆಟ್ಟುಹೋಗಿರುವ ಬೆಳ್ಳುಳ್ಳಿ ಹಾಗೂ ಸಂಬಾರ ಪದಾರ್ಥಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಬ್ಬಂದಿಗಳಿಗೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು. ಕ್ಯಾಂಟೀನ್ ನಿರ್ವಹಣೆಯ ಗುತ್ತಿಗೆದಾರರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ತಕ್ಷಣ ಕ್ಯಾಂಟೀನ್ ಗೆ ಸಹಾಯಕ ಸಿಬ್ಬಂದಿಗಳನ್ನು ನೇಮಿಸಬೇಕು, ಶುಚಿತ್ವ ಕಾಪಾಡಬೇಕು ಮತ್ತು ದಿನಸಿ ಸಾಮಗ್ರಿಗಳ ಡಬ್ಬಿಗಳನ್ನು ಬದಲಾಯಿಸಬೇಕೆಂದು ಸೂಚಿಸಿದರು.

ಕ್ಯಾಂಟೀನ್ ಒಳ ಹಾಗೂ ಹೊರಭಾಗದಲ್ಲಿ ಅಶುಚಿತ್ವದ ವಾತಾವರಣವಿದ್ದ ಕಾರಣ ಸ್ಥಳಕ್ಕೆ ಆರೋಗ್ಯ ನಿರೀಕ್ಷಕ ಪರಮೇಶ್ವರ್ ಅವರನ್ನು ಕರೆಸಿದ ವೀಣಾಅಚ್ಚಯ್ಯ, ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಇಂದಿರಾ ಕ್ಯಾಂಟೀನ್ ಆವರಣದಲ್ಲಿ ಮಾಸಿಹೋಗಿರುವ ಮಾಜಿ ಪ್ರಧಾನಿ ಇಂದಿರಾಗಾAಧಿ ಅವರ ಭಾವಚಿತ್ರವನ್ನು ಬದಲಾಯಿಸಿ ನೂತನ ಭಾವಚಿತ್ರ ಅಳವಡಿಸುವಂತೆ ಸೂಚನೆ ನೀಡಿದರು. ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ವೀಣಾಅಚ್ಚಯ್ಯ ಅವರು ಸಾರ್ವಜನಿಕರ ಅಹವಾಲು ಆಲಿಸಿದರು. ಕುಡಿಯುವ ನೀರಿನ ಕೊರತೆಯಿಂದ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದ ಬಗ್ಗೆ ವ್ಯಕ್ತಿಯೊಬ್ಬರು ಗಮನ ಸೆಳೆದರು.

ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಎಂಎಲ್‌ಸಿ, ಮುಂದಿನ ೩ ದಿನಗಳೊಳಗೆ ಇಂದಿರಾ ಕ್ಯಾಂಟೀನ್ ಮತ್ತು ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೀಣಾಅಚ್ಚಯ್ಯ ಬಡವರ, ಕಾರ್ಮಿಕರ, ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಯಿಂದ ಕೂಡಿದ್ದು, ನಿರ್ಲಕ್ಷö್ಯದ ಬಗ್ಗೆ ವಿಧಾನ ಪರಿಷತ್‌ನಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

ಡಿಸಿಸಿ ಪದಾಧಿಕಾರಿಗಳಾದ ಅಬ್ದುಲ್ ರಜಾಕ್, ಚುಮ್ಮಿದೇವಯ್ಯ, ಸಾಮಾಜಿಕ ಜಾಲತಾಣದ ಉಪಾಧ್ಯಕ್ಷ ಚಂದ್ರಶೇಖರ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ, ಹಿಂದುಳಿದ ಘಟಕದ ನಗರಾಧ್ಯಕ್ಷ ಜಗದೀಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಾ ಮೈನಾ, ವಿಧಾನ ಪರಿಷತ್ ಸದಸ್ಯರ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಈ ಸಂದರ್ಭ ಹಾಜರಿದ್ದರು.