ಕಣಿವೆ, ಫೆ. ೨೩ : ಕಳೆದ ಆರು ತಿಂಗಳಿAದಲೂ ಏರಿಕೆ ಕಾಣದೇ ಸ್ಥಿತ್ಯಂತರ ಕಾಯ್ದುಕೊಂಡಿದ್ದ ಶುಂಠಿ ಬೆಲೆಯಲ್ಲಿ ಇದೀಗ ಒಂದಷ್ಟು ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ೬೦ ಕೆಜಿ ಚೀಲವೊಂದರ ಶುಂಠಿ ಫಸಲಿಗೆ ಒಂದು ಸಾವಿರ ರೂ. ಇದೆ. ಹಾಗಾಗಿ ಉತ್ತಮ ಬೆಲೆಗಾಗಿ ಕಾಯುತ್ತಾ ಕುಳಿತಿದ್ದ ಬೆಳೆಗಾರರ ಮೊಗದಲ್ಲಿ ಒಂದಷ್ಟು ಮಂದಹಾಸ ಕಾಣಿಸಿದೆ.
ಕಳೆದ ಜೂನ್ ನಿಂದಲೂ ೬೦೦ ರೂಗಳ ಆಚೆ ಜಿಗಿತವಾಗದೇ ಒಂದೇ ಅಂತರ ಕಾಯ್ದುಕೊಂಡ ಬೆಲೆಯಲ್ಲಿ ಇದೀಗ ೩೦೦ ರೂ ಗಳಿಂದ ೩೫೦ ರೂಗಳವರೆಗೆ ಏರಿಕೆ ಕಂಡಿದೆ. ಹಾಗೆಯೇ ಈ ಬಾರಿಯ ಹಂಗಾಮಿಗೆ ಬಿತ್ತನೆ ಮಾಡುವ ತವಕ ದಲ್ಲಿದ್ದ ಬೆಳೆಗಾರರಲ್ಲಿ ಈ ಬೆಲೆ ಒಂದಷ್ಟು ಆಶಾವಾದ ಮೂಡಿಸಿದೆ. ಹಾಗಾಗಿ ಬಿತ್ತನೆ ಬೀಜದ ಬೆಲೆ ಚೀಲವೊಂದಕ್ಕೆ ೧೦೦೦ ರೂಗಳ ಆಸುಪಾಸಿನಲ್ಲಿ ಇದ್ದದ್ದು ಇದೀಗ ಮಾರುಕಟ್ಟೆಯಲ್ಲಿ ಶುಂಠಿಯ ಧಾರಣೆ ಏರಿಕೆ ಕಂಡೊಡನೆ ಇದರ ಬೆಲೆಯು ಜಿಗಿತಗೊಂಡಿದೆ.
ಈಗಾಗಲೇ ಫೆಬ್ರವರಿ ಮಾಸಾಂತ್ಯದಿAದ ಏಪ್ರಿಲ್ ತಿಂಗಳ ಅಂತ್ಯದವರೆಗೂ ಶುಂಠಿ ಬಿತ್ತನೆಗೆ ಕೃಷಿಕರು ಪ್ರತೀ ವರ್ಷವೂ ತೊಡಗಿಸಿಕೊಳ್ಳುತ್ತಾರೆ.
ಹಾಗಾಗಿ ಈ ಬಾರಿ ಬಿತ್ತನೆ ಮಾಡಲು ಸಿದ್ಧತೆ ನಡೆಸಿರುವ ಕೃಷಿಕರು ಈಗಾಗಲೇ ಭೂಮಿಯನ್ನು ಉಳುಮೆ ಮಾಡಿ ದನದ ಗೊಬ್ಬರವನ್ನು ಉದ್ದೇಶಿತ ಶುಂಠಿ ಬಿತ್ತನೆಯ ಹೊಲಕ್ಕೆ ಹಾಕಿದ್ದಾರೆ. ಹಾಗೆಯೇ ೧೦೦೦ ರೂಗಳ ಆಸುಪಾಸಿನಲ್ಲಿದ್ದ ಬಿತ್ತನೆ ಬೀಜವನ್ನು ಕೆಲವರು ಖರೀದಿಸಿ ತಂದು ಬೀಜೋಪಚಾರಕ್ಕೆ ಒಳಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಬೆಲೆಕುಸಿತವಾದ ಹಿನ್ನೆಲೆಯಲ್ಲಿ ನಿರಂತರವಾಗಿ ನಷ್ಟ ಅನುಭವಿಸಿದ ಸಣ್ಣಪುಟ್ಟ ಹಿಡುವಳಿದಾರರು ಕೆಲವರು ಈ ಬಾರಿ ಶುಂಠಿ ಬಿತ್ತನೆಯಿಂದ ದೂರ ಸರಿದಿದ್ದಾರೆ. ಹಾಗೆಯೇ ಕೆಲವು ಬಂಡವಾಳ ಶಾಹಿ ಕೃಷಿಕರು ಕಳೆದ ಎರಡು ವರ್ಷಗಳಲ್ಲಿ ಹೋದದ್ದನ್ನು ಈ ಬಾರಿ ಗಳಿಸುವ ಕನಸು ಕಟ್ಟಿ ಮತ್ತೆ ಈ ಬಾರಿಯು ಶುಂಠಿ ಬಿತ್ತನೆಗೆ ಮುಂದಾಗಿದ್ದಾರೆ.