ಮಡಿಕೇರಿ, ಫೆ.೨೪ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕೊಡಗು ಜಿಲ್ಲಾ ಮೊಗೇರ ಸಮಾಜದ ವತಿಯಿಂದ “ಮೊಗೇರರ ದುಡಿ ಕುಣಿತ” ತರಬೇತಿ ಶಿಬಿರ ನಡೆಯಿತು.

ನಗರದ ಕೋಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ.ರವಿ ಮಾತನಾಡಿ ಮೊಗೇರ ಜನಾಂಗದ ಪ್ರಾಚೀನ ಜನಪದ ಕಲೆಯಾಗಿರುವ ಮೊಗೇರರ ದುಡಿಕುಣಿತ ಜನಾಂಗದ ಅವಿಭಾಜ್ಯ ಅಂಗವಾಗಿದೆ. ತುಳುಭಾಷೆಗೆ ಮತ್ತು ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಕಲೆಯಾಗಿದ್ದು, ಮೊಗೇರ ಜನಾಂಗದ ಕುಲಲಾಂಛನವಾಗಿದೆ ಎಂದರು.

ವಿವಾಹ ಕಾರ್ಯಕ್ರಮಕ್ಕೆ ದುಡಿಯನ್ನು ಕಡ್ಡಾಯವಾಗಿ ಬಳಸಬೇಕೆಂದು ತಿಳಿಸಿದ ಅವರು, ಜನಾಂಗವು ಆರ್ಥಿಕವಾಗಿ ಹಿಂದೆ ಉಳಿದಿದ್ದರೂ ಸಂಸ್ಕೃತಿ ಶ್ರೀಮಂತವಾಗಿದೆ ಎಂದರು.

ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿ, ಮೊಗೇರ ಜನಾಂಗದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಲು ಈ ರೀತಿಯ ತರಬೇತಿ ಶಿಬಿರಗಳು ನಡೆಯುತ್ತಿರಬೇಕು. ಸಮಾಜದ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳು ವಂತಾಗಬೇಕು, ದುಡಿ ಕಲೆಗೆ ಇರುವ ಮಹತ್ವವನ್ನು ತಿಳಿದುಕೊಳ್ಳಬೇಕು. ಅಕಾಡೆಮಿ ಸಹಕಾರದೊಂದಿಗೆ ಈ ಶಿಬಿರ ನಡೆಯುತ್ತಿರುವುದು ಹರ್ಷದಾಯಕವೆಂದು ತಿಳಿಸಿದರು.

ಜಿ.ಪಂ ಮಾಜಿ ಅಧ್ಯಕ್ಷ ಬಿ.ಶಿವಪ್ಪ ಮಾತನಾಡಿ, ಮೊಗೇರರ ದುಡಿಕುಣಿತಕ್ಕೆ ತನ್ನದೇ ಆದ ಇತಿಹಾಸವಿದೆ ಎಂದರು.

ಸೋಮವಾರಪೇಟೆ ತಾಲೂಕು ಮೊಗೇರ ಸಮಾಜದ ಅಧ್ಯಕ್ಷ ಬಿ.ಎಂ.ದಾಮೋದರ ಮಾತನಾಡಿ, ಸಂಸ್ಕೃತಿಯ ಅಮೂಲ್ಯ ಭಾಗವಾಗಿರುವ ದುಡಿಕುಣಿತ ಮೊಗೇರ ಸಮುದಾಯದ ಹೆಮ್ಮೆಯ ಸಂಕೇತವಾಗಿದೆ. ಚೋಮನ ದುಡಿ ಕಾದಂಬರಿ ಸೇರಿದಂತೆ ತುಳು ಸಂಸ್ಕೃತಿಯ ಅಧ್ಯಯನದಲ್ಲಿ ಮೊಗೇರರ ದುಡಿಯ ಮಹತ್ವ ತಿಳಿಸಿದ್ದು, ಶಿಬಿರ ಸದುಪಯೋಗವಾಗಬೇಕು ಎಂದರು.

ವಿರಾಜಪೇಟೆ ತಾಲೂಕು ಗೌರವಾಧ್ಯಕ್ಷ ಮೋಹನ್ ಜಿ., ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಬಿ.ಸುರೇಶ್, ಸದಸ್ಯರಾದ ಸೋಮಯ್ಯ, ನಾರಾಯಣ, ವಿಶ್ವನಾಥ್, ಪಿ.ಸಿ.ರಘು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಪಿ.ಬಿ.ಜನಾರ್ಧನ ಸ್ವಾಗತಿಸಿ, ನಿರೂಪಿಸಿದರು. ಕೆ.ಜಿ.ರಮ್ಯ ಪ್ರಾರ್ಥಿಸಿ, ಪಿ.ಸಿ.ರಮೇಶ್ ವಂದಿಸಿದರು. ಕೆ. ಮನ್ಸ ಮೊಗೇರ, ಮಾದವ, ಚಂದ್ರಶೇಖರ ಅವರು ದುಡಿಕುಣಿತದ ತರಬೇತಿಯನ್ನು ನೀಡಿದರು. ತರಬೇತಿ ಶಿಬಿರ ಶುಕ್ರವಾರ ಕೂಡ ನಡೆಯಲಿದೆ.