ಶನಿವಾರಸಂತೆ, ಫೆ. ೨೪: ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ೩ ವಿದ್ಯಾರ್ಥಿನಿಯರು ಇಂದು ಕಾಲೇಜಿನ ಅಂತರಿಕ ಮೌಲ್ಯ ಮಾಪನ ಪರೀಕ್ಷೆ ಬರೆಯಲು ಹಿಜಾಬ್ ಧರಿಸಿ ಬಂದು ಕಾಲೇಜಿನ ಒಳಗಡೆ ಪ್ರವೇಶ ದೊರೆಯದೆ ಮನೆಗೆ ಹಿಂತಿರುಗಿದರು.
ಭಾರತಿ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ೧೨ ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ ೬ ಮಂದಿ ವಿದ್ಯಾರ್ಥಿನಿಯರು ಇಂದು ಹಿಜಾಬ್ ತೆಗೆದಿರಿಸಿ ಪರೀಕ್ಷೆ ಬರೆದರು. ೩ ಮಂದಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಬರಲಿಲ್ಲ ಇನ್ನುಳಿದ ೩ ಮಂದಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಹಿಜಾಬ್ ಧರಿಸಿ ಬೆಳಿಗ್ಗೆ ಕಾಲೇಜಿನ ಬಳಿ ಬಂದಾಗ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಕೆ. ಅಪ್ಪಸ್ವಾಮಿ, ಗೌರವ ಕಾರ್ಯದರ್ಶಿ ಕೆ.ಎಂ. ಜಗನ್‌ಪಾಲ್, ಪ್ರಾಂಶುಪಾಲ ಇ.ಎಂ. ದಯಾನಂದ್ ಹಾಗೂ ಉಪನ್ಯಾಸಕರುಗಳು ವಿದ್ಯಾರ್ಥಿನಿಯರ ಮನವೊಲಿಸಲು ಪ್ರಯತ್ನಪಟ್ಟರು. ಸರಕಾರದ ಆದೇಶವನ್ನು ವಿದ್ಯಾರ್ಥಿನಿಯರಿಗೆ ತಿಳಿಸಿದರು. ಆದರೆ ವಿದ್ಯಾರ್ಥಿನಿಯರು ನಮಗೆ ಧರ್ಮ ಮುಖ್ಯ ಎಂದು ಪರೀಕ್ಷೆ ಬರೆಯಲು ನಿರಾಕರಿಸಿ ಮನೆಯತ್ತ ತೆರಳಿದರು. ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.