*ಗೋಣಿಕೊಪ್ಪ, ಫೆ. ೨೨: ಹೈಸೊಡ್ಲೂರು ಮತ್ತು ಕೆ. ಬಾಡಗ ಗ್ರಾಮದ ನಿರಾಶ್ರಿತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಅಹೋರಾತ್ರಿ ಧರÀಣಿ ನಡೆಸಲು ದಲಿತ ಸಂಘರ್ಷ ಸಮಿತಿ ನಿರ್ಧರಿಸಿದೆ.
ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ಮುಂದಾಳತ್ವದಲ್ಲಿ ಜೋಡುಬೀಟಿ ನೆಹರು ಕಾಲೋನಿ ಅಂಬೇಡ್ಕರ್ ಭವನದಲ್ಲಿ ಸಮಸ್ಯೆಗಳ ಪರಿಹಾರ ಕುರಿತು ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ತಾ. ೨೮ ರಂದು ಪೊನ್ನಂಪೇಟೆ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು. ಇದಕ್ಕೆ ದಲಿತ ಸಮುದಾಯದವರು ಹಾಗೂ ಸಮಿತಿಯ ಪದಾಧಿಕಾರಿಗಳು ಭಾಗವಹಿಸುವ ಮೂಲಕ ಸಹಕಾರ ಮನೋಭಾವವನ್ನು ವ್ಯಕ್ತಪಡಿಸಬೇಕೆಂದು ಸಭೆಯಲ್ಲಿ ಮನವಿ ಮಾಡಲಾಯಿತು.
ಬೇಡಿಕೆ ಈಡೇರುವವರೆಗೆ ಮತ್ತು ರಾಜ್ಯದ ಮುಖ್ಯಮಂತ್ರಿ ಖುದ್ದಾಗಿ ಬಂದು ನಮ್ಮ ಮನವಿಯನ್ನು ಸ್ವೀಕರಿಸಿ ಹೈಸೊಡ್ಲೂರು ಹಾಗೂ ಕೆ. ಬಾಡಗದ ಸಮಸ್ಯೆಗಳು ಪರಿಹಾರವಾಗುವ ತನಕ ಧರಣಿ ಸತ್ಯಾಗ್ರಹ ಮುಂದುವರಿಸಲು ಒಮ್ಮತದಿಂದ ತೀರ್ಮಾನಿಸಲಾಯಿತು. ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಗೋವಿಂದಪ್ಪ, ವಿಭಾಗೀಯ ಸಂಚಾಲಕ ಎಸ್.ಎಸ್. ಕೃಷ್ಣಪ್ಪ, ಜಿಲ್ಲಾ ಖಜಾಂಚಿ ಮಹಾದೇವ್, ಗಿರೀಶ್ ಸೇರಿದಂತೆ ಇನ್ನಿತರ ದಲಿತ ಮುಖಂಡರುಗಳು ಹಾಜರಿದ್ದರು.