ಮಡಿಕೇರಿ, ಫೆ. ೨೨: ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಾಗಿ ಮುಂಬರಲಿರುವ ರಾಜ್ಯ ಬಜೆಟ್ನಲ್ಲಿ ಸರಕಾರ ಘೋಷಿಸಲು ಸಹಕರಿಸಬೇಕೆಂದು ಯುನೈಟೆಡ್ ಕೊಡವ ಆರ್ಗನೈನೇಷನ್ (ಯುಕೋ) ಸಂಘಟನೆ ಮಾಡಿರುವ ಮನವಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಂದಿಸಿದ್ದಾರೆ. ನಿನ್ನೆ ಕಟೀಲ್ ಅವರನ್ನು ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹಾಗೂ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭ ಸಂಸದ ಪ್ರತಾಪ್ ಸಿಂಹ ಅವರು ಜತೆಗಿದ್ದರು. ಬಳಿಕ ಸ್ಪಂದಿಸಿರುವ ಕಟೀಲ್ ಅವರು ಈ ಮನವಿಯ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ರವಾನಿಸಿದ್ದಾರೆ. ಅಲ್ಲದೆ ಅವರು ಹಾಗೂ ಸಂಸದರು ಬಳಿಕ ಮುಖ್ಯಮಂತ್ರಿಗಳೊAದಿಗೂ ಸಮಾಲೋಚಿಸಿದ್ದಾಗಿ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ. ನಿಯೋಗದಲ್ಲಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಕಾಟಿಮಾಡ ಗಿರಿ ಅಯ್ಯಪ್ಪ, ನೆಲ್ಲಮಕ್ಕಡ ಮಾದಯ್ಯ ಮತ್ತಿತರರು ಇದ್ದರು.