ಸೋಮವಾರಪೇಟೆ, ಫೆ. ೨೨: ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಪ್ರಖಂಡ ಸಹ ಸಂಯೋಜಕ ಹರ್ಷ ಅವರ ಹತ್ಯೆಯನ್ನು ಖಂಡಿಸಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಹರ್ಷ ಅವರ ಭಾವಚಿತ್ರ ಕ್ಕೆ ಪುಷ್ಪನಮನ ಸಲ್ಲಿಸಿ, ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿದರು. ಈ ಸಂದರ್ಭ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಮಾತನಾಡಿ, ಹಿಂದೂ ಸಮಾಜದ ಕಾರ್ಯಕರ್ತರು ಹಾಗೂ ಮುಖಂಡರ ಮೇಲೆ ನಿರಂತರ ಹಲ್ಲೆ-ಹತ್ಯೆ ನಡೆಸುತ್ತಿರುವ ಇಂತಹ ಮತಾಂಧರನ್ನು ಕೇವಲ ಬಂಧಿಸಿದರಷ್ಟೇ ಸಾಲದು, ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಸಮಾಜದಲ್ಲಿ ನಿರಂತರವಾಗಿ ಅಶಾಂತಿ ಸೃಷ್ಟಿಸುತ್ತಿರುವ ಪಿ.ಎಫ್.ಐ. ಸೇರಿದಂತೆ ಇತರ ಮತಾಂಧ ಸಂಘಟನೆಗಳನ್ನು ನಿಷೇಧಿಸಿ, ಕಟ್ಟುನಿಟ್ಟಿನ ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಮುಖಂಡರಾದ ಹೆಚ್.ಕೆ. ಮಾದಪ್ಪ, ಬಿ.ಜೆ. ದೀಪಕ್, ಮಹೇಶ್ ತಿಮ್ಮಯ್ಯ, ಮೋಹಿತ್ ತಿಮ್ಮಯ್ಯ, ರೂಪಾ ಸತೀಶ್, ಪಿ.ಕೆ. ಚಂದ್ರು, ಬಿ.ಆರ್. ಮಹೇಶ್, ಎಸ್.ಆರ್. ಸೋಮೇಶ್, ಹಿಂದೂ ಪರ ಸಂಘಟನೆಯ ಉಮೇಶ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.