ಸೋಮವಾರಪೇಟೆ,ಫೆ.೨೧: ಕರ್ನಾಟಕದಲ್ಲಿ ಇತರ ಭಾಷೆಗಳ ನಡುವೆಯೂ ಕನ್ನಡವು ತನ್ನ ನೆಲೆಯನ್ನು ಉಳಿಸಿಕೊಂಡಿದೆ. ಕನ್ನಡ ಮನಸ್ಸುಗಳ ಹೋರಾಟದಿಂದ ಭಾಷೆ-ಸಾಹಿತ್ಯ ಜೀವಂತವಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ನೂತನ ಸಾಲಿನ ಆಡಳಿತ ಮಂಡಳಿ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಇತರ ಪಟ್ಟಣ ಪ್ರದೇಶಗಳಲ್ಲಿ ಕನ್ನಡ ಭಾಷಿಕರನ್ನು ಹುಡುಕುವ ಪರಿಸ್ಥಿತಿ ಇದ್ದ ಸಂದರ್ಭ ಕನ್ನಡ ಪರ ಹೋರಾಟಗಾರರು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ ನಾಡು, ನುಡಿ, ನೆಲ ಜಲಕ್ಕೆ ಧಕ್ಕೆಯಾದ ಸಂದರ್ಭ ಬೀದಿಗಿಳಿದು ಹೋರಾಟ ನಡೆಸಿದ್ದಾರೆ ಎಂದ ಅವರು, ೧೦೭ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ ಸಹ ಭಾಷೆ, ಸಾಹಿತ್ಯಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ ಎಂದರು.

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಯಾಗುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಸರ್ಕಾರವು ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮದಲ್ಲೂ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತಂದಿದೆ ಎಂದರು.

ತಾಲೂಕು ಕಸಾಪ ನೂತನ ಅಧ್ಯಕ್ಷ ಎಸ್.ಡಿ. ವಿಜೇತ್, ಗೌರವ ಕಾರ್ಯದರ್ಶಿಗಳಾದ ಎ.ಪಿ. ವೀರರಾಜು, ಜ್ಯೋತಿ ಅರುಣ್, ಕೋಶಾಧಿಕಾರಿ ಕೆ.ಪಿ. ದಿನೇಶ್ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಅಹ್ವಾನಿತರಿಗೆ ಕಸಾಪ ಮಾಜೀ ಜಿಲ್ಲಾಧ್ಯಕ್ಷ ಹಾಗೂ ಮಾರ್ಗದರ್ಶಕ ಟಿ.ಪಿ. ರಮೇಶ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ನಂತರ ಮಾತನಾಡಿದ ಅವರು, ಕನ್ನಡ ಮನಸ್ಸುಗಳೆಲ್ಲರೂ ಒಟ್ಟಾಗಿ ಕನ್ನಡ ಸಾಹಿತ್ಯದ ತೇರನ್ನೆಳೆಯಬೇಕು. ಕಸಾಪದಿಂದ ಅವಕಾಶಗಳನ್ನು ಪಡೆದವರು ಪರಿಷತ್ ನ ಒಳಗೆ ಬಂದು ಸೇವೆ ಸಲ್ಲಿಸಬೇಕು. ಹೊಸ ತಲೆಮಾರಿನ ಸಾಹಿತ್ಯಾಸಕ್ತರು ಜೊತೆಯಾಗಬೇಕು. ಉಪ ಭಾಷೆಗಳನ್ನು ಕಡೆಗಣಿಸದೇ ಅವುಗಳನ್ನು ಜೊತೆಯಲ್ಲೇ ಕೊಂಡೊಯ್ಯಬೇಕು ಎಂದರು.

ಜಿಲ್ಲೆಯಲ್ಲಿ ಈಗಾಗಲೇ ೨೧ ದತ್ತಿನಿಧಿ ಇದ್ದು, ಇದನ್ನು ೫೦ಕ್ಕೆ ಏರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಮನಸ್ತಾಪಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ಪರಿಷತ್ ನ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಉಪ ರಾಜ್ಯಪಾಲ ಎಚ್.ಟಿ. ಅನಿಲ್ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಫಲಕಗಳಿಗೆ ಆದ್ಯತೆ ನೀಡಬೇಕಿದೆ. ಪ್ರವಾಸಿ ತಾಣಗಳಲ್ಲಿ ಕನ್ನಡದ ಮಾಹಿತಿ ಫಲಕ ಕಡ್ಡಾಯವಾಗಿ ಹಾಕಬೇಕೆಂಬ ನಿಯಮ ಜಾರಿಗೆ ತರಬೇಕು. ಗಡಿಗಳಲ್ಲಿ ಕಸಾಪದಿಂದ ಸ್ವಾಗತ ಫಲಕ ಅಳವಡಿಸಬೇಕು. ಪರಿಷತ್‌ನ ಬೆಳವಣಿಗೆಗೆ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಪುಸ್ತಕ ಮಳಿಗೆ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಕನ್ನಡ ಮನಸ್ಸುಗಳ ಸಹಕಾರದೊಂದಿಗೆ ಸಾಹಿತ್ಯದ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈಗಾಗಲೇ ಜಿಲ್ಲೆಯ ೫ ತಾಲೂಕುಗಳಲ್ಲಿಯೂ ಸಮಿತಿ ರಚಿಸಲಾಗಿದೆ. ಸದಸ್ಯತ್ವ ಶುಲ್ಕವನ್ನು ೫೦೦ರಿಂದ ೨೫೦ಕ್ಕೆ ಇಳಿಸುವ ಸಂಬAಧ ರಾಜ್ಯ ಸಮಿತಿ ನಿರ್ಣಯ ಕೈಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಪರಿಷತ್ ಕಾರ್ಯಕ್ರಮಗಳನ್ನು ಸ್ಥಳೀಯ ಮಟ್ಟಕ್ಕೆ ವಿಸ್ತರಿಸಲಾಗುವುದು ಎಂದು ಕೇಶವ ಕಾಮತ್ ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ.ಚಂದ್ರು, ನಿಕಟಪೂರ್ವ ಅಧ್ಯಕ್ಷ ಹೆಚ್.ಜೆ. ಜವರ, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ, ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ, ಆಹ್ವಾನಿತರಾದ ಕೆ.ಟಿ. ಬೇಬಿ ಮ್ಯಾಥ್ಯೂ ಅವರುಗಳು ಉಪಸ್ಥಿತರಿದ್ದರು.