ಸೋಮವಾರಪೇಟೆ, ಫೆ.೨೧: ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವಂತೆ ಅನೇಕ ವರ್ಷದಿಂದ ಬೇಡಿಕೆ ಇಡುತ್ತಿದ್ದರೂ ಸರ್ಕಾರ ರೈತರ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪಟ್ಟಣದ ಜೇಸೀ ವೇದಿಕೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾಫಿ ಬೆಳೆಗಾರರ ೧೦ ಎಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಬೇಕು. ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ, ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ಇನ್ನಿತರ ಬೇಡಿಕೆ ಗಳನ್ನು ಈಡೇರಿಸಲು ಅಧಿವೇಶನ ದಲ್ಲಿ ಕ್ರಮಕೈಗೊಳ್ಳಬೇಕೆಂದು ರೈತ ಸಂಘದ ಸಂಚಾಲಕ ಜಿ.ಎಂ. ಹೂವಯ್ಯ ಆಗ್ರಹಿಸಿದರು.
ಕಳೆದ ಬಾರಿ ಬೆಳಗಾವಿ ಅಧಿವೇಶನ ಸಂದರ್ಭವೂ ರೈತ ಸಂಘದ ವತಿಯಿಂದ ೧೭ ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ಬೇಡಿಕೆ ಈಡೇರಿಸುವ ಭರವಸೆಯನ್ನು ಸ್ಥಳೀಯ ಶಾಸಕರುಗಳು ನೀಡಿದ್ದರೂ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಇತರ ಜಿಲ್ಲೆಗಳಲ್ಲಿ ಕೃಷಿಗೆ ಉಚಿತ ವಿದ್ಯುತ್ ನೀಡುತ್ತಿದ್ದರೂ ಕೊಡಗಿನಲ್ಲಿ ಮಾತ್ರ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ರೈತ ಸಂಘದ ಪ್ರಮುಖರುಗಳು ಆರೋಪಿಸಿದರು.
ಕೊಡಗಿನ ರೈತರ, ಕಾಫಿ ಬೆಳೆಗಾರರ ಸಮಸ್ಯೆಯನ್ನು ಸರ್ಕಾರಕ್ಕೆ ತಲುಪಿಸುವಲ್ಲಿ ಜನಪ್ರತಿನಿಧಿಗಳು ಸೋತಿದ್ದಾರೆ. ಈಗಲಾದರೂ ಅಧಿವೇಶನದಲ್ಲಿ ಸರ್ಕಾರಕ್ಕೆ ಸಮಸ್ಯೆ ಯನ್ನು ಮನವರಿಕೆ ಮಾಡಿಕೊಟ್ಟು ಜಿಲ್ಲೆಯ ರೈತರು ಹಾಗೂ ಬೆಳೆಗಾರರನ್ನು ರಕ್ಷಿಸಬೇಕು. ಸದನದ ಬಾವಿಗೆ ಇಳಿದು ಶಾಸಕರುಗಳು ಧರಣಿ ನಡೆಸಬೇಕು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಆಗ್ರಹಿಸಿದರು.
ಅತಿವೃಷ್ಟಿ, ಅಕಾಲಿಕ ಮಳೆಯಿಂದ ರೈತರ ಬದುಕು ಬೀದಿಗೆ ಬಂದಿದೆ. ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು, ಮಾರುಕಟ್ಟೆಯಲ್ಲಿ ನ್ಯಾಯೋಚಿತ ಬೆಲೆ ಲಭಿಸುತ್ತಿಲ್ಲ. ಹೀಗಾಗಿ ಕೃಷಿಯಿಂದ ರೈತರು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ರೈತರ ಹಿತ ಮರೆತರೆ ಕ್ಷಮಿಸಲು ಸಾಧ್ಯವಿಲ್ಲ. ತಕ್ಷಣ ಉಚಿತ ವಿದ್ಯುತ್ ನೊಂದಿಗೆ ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಬೇಕೆಂದು ಸಂಘದ ತಾಲೂಕು ಅಧ್ಯಕ್ಷ ದಿನೇಶ್ ಒತ್ತಾಯಿಸಿದರು.
ಈ ಬಜೆಟ್‌ನಲ್ಲಿಯೇ ರೈತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಘೋಷಣೆ ಮಾಡಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತ ಸಂಘದಿAದ ವಿಧಾನ ಸೌಧ ಚಲೋ ಸೇರಿದಂತೆ ರಸ್ತೆ ತಡೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ಸುಭಾಷ್ ಸುಬ್ಬಯ್ಯ ಒತ್ತಾಯಿಸಿದರು.
ಧರಣಿಯಲ್ಲಿ ರೈತಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಲಿಂಗೇರಿ ರಾಜೇಶ್, ಕೃಷಿ ಬೋರ್‌ವೆಲ್ ಮಾಲೀಕರ ಸಂಘದ ಅಧ್ಯಕ್ಷ ಗಣಗೂರು ಚಂದ್ರಶೇಖರ್, ರೈತ ಮುಖಂಡರಾದ ಎ.ಆರ್. ಕುಶಾಲಪ್ಪ, ಎಸ್.ಬಿ.ರಾಜಪ್ಪ, ಮಚ್ಚಂಡ ಅಶೋಕ್, ಜಯಶಂಕರ್, ಮಂದಣ್ಣ, ಜಿಲ್ಲಾ ಸಂಘದ ಬಾಳೆಲೆ ರಘು, ತಿತಿಮತಿ ಸತೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ ನಾಗರಾಜು ಸೇರಿದಂತೆ ರೈತ ಮುಖಂಡರು ಭಾಗಿಯಾಗಿದ್ದರು.