ಮಡಿಕೇರಿ, ಫೆ.೨೧ : ಜೀವನದಲ್ಲಿ ಸಂಕಷ್ಟಗಳು ಎದುರಾಗುವುದು ಸಹಜ, ನಿರಂತರ ಪ್ರಯತ್ನದ ಮೂಲಕ ಮಾತ್ರ ಪರಿಹಾರದ ಪ್ರತಿಫಲ ಸಿಗಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸಾಹಿತಿ ಈರಮಂಡ ಹರಿಣಿ ವಿಜಯ್ ಅವರು ರಚಿಸಿರುವ ಕೊಡವ ಮಕ್ಕಡ ಕೂಟದ ೫೨ ನೇ ಪುಸ್ತಕ “ಬದುಕಿನ ಚಕ್ರ”ವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಸಮಸ್ಯೆಗಳಿಗೆ ಅಂಜದೆ ಮುನ್ನಡೆಯಬೇಕೆಂದರು. ಚಿಂತೆ ಬಂತೆAದು ಚಿಂತಿಸುತ್ತಾ ಇರದೆ ಯಶಸ್ಸಿಗಾಗಿ ಸತತ ಪ್ರಯತ್ನದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಾಹಿತಿ ಈರಮಂಡ ಹರಿಣಿ ವಿಜಯ್ ಮಾತನಾಡಿ ಮಹಿಳೆ ಅಡುಗೆ ಕೋಣೆಗಷ್ಟೇ ಸೀಮಿತವಾಗದೆ ಕ್ರಿಯಾತ್ಮಕವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂದು ಹೇಳಿದರು.
ಪೊಲೀಸ್ ಮತ್ತು ಸೇನಾ ಕ್ಷೇತ್ರದಲ್ಲಿ ಇಂದು ಮಹಿಳೆಯರು ಸೇವೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಪ್ರತಿಯೊಬ್ಬ ಮಹಿಳೆ ಧೈರ್ಯವಾಗಿ ಜೀವನ ಸಾಗಿಸಬೇಕು, ಶಿಕ್ಷಣ ಅತಿಮುಖ್ಯವಾಗಿದೆ ಎಂದರು.
ದಾರಿ ತಪ್ಪಿದ ಯುವಕ ತಪ್ಪನ್ನು ತಿದ್ದಿಕೊಂಡು
(ಮೊದಲ ಪುಟದಿಂದ) ಉನ್ನತ ಅಧಿಕಾರಿಯಾಗಿ ಗುರಿ ಸಾಧಿಸುವ ಕಥಾಹಂದರ “ಬದುಕಿನ ಚಕ್ರ” ಪುಸ್ತಕದಲ್ಲಿದೆ ಎಂದು ವಿವರಿಸಿದರು.
ನಟ, ನಿರ್ದೇಶಕ, ನಿರ್ಮಾಪಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ ಹೆಣ್ಣಿನ ಭಾವನೆಗಳು ಸಾಹಿತ್ಯ ರೂಪ ಪಡೆದುಕೊಂಡಾಗ ಕಷ್ಟ, ಸುಖಗಳ ಚಿತ್ರಣ ಸುಲಭವಾಗಿ ಜನರ ಮನ ಮುಟ್ಟುತ್ತದೆ. ಹೆಣ್ಣು ಕಥೆ ಬರೆದರೆ ಸಮಾಜಕ್ಕೆ ಮಾದರಿಯಾಗಿರುತ್ತದೆ, ಸಾಹಿತ್ಯ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕೊಡಂಬೂರು ದವಸ ಭಂಡಾರ ಸಂಘದ ಉಪಾಧ್ಯಕ್ಷೆ ಈರಮಂಡ ಪೊನ್ನಮ್ಮ ಉತ್ತಯ್ಯ ಮಾತನಾಡಿ ಹೊಸ ಸಾಹಿತಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ದಶಮಾನೋತ್ಸವದ ಸಂಭ್ರಮದಲ್ಲಿದೆ. ಇಲ್ಲಿಯವರೆಗೆ ಒಟ್ಟು ೫೨ ಪುಸ್ತಕಗಳನ್ನು ಹೊರ ತಂದು ಸಾಹಿತಿಗಳಿಗೆ ಪ್ರೋತ್ಸಾಹ ನೀಡಿದೆ ಎಂದರು.
ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಉಪಸ್ಥಿತರಿದ್ದರು. ಈ ಹಿಂದೆ ಕೊಡಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಪ್ರಸ್ತುತ ಕರ್ನಾಟಕ ರೈಲ್ವೇಸ್ ಎಡಿಜಿಪಿ ಆಗಿರುವ ಭಾಸ್ಕರ್ ರಾವ್ ಅವರು “ಬದುಕಿನ ಚಕ್ರ” ಕೃತಿಗೆ ನುಡಿಮುತ್ತು ಬರೆದಿದ್ದಾರೆ.