*ಗೋಣಿಕೊಪ್ಪ, ಫೆ. ೨೨: ತಿತಿಮತಿ, ದೇವರಪುರ ಗ್ರಾ. ಪಂ. ವ್ಯಾಪ್ತಿಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗುತ್ತಿದೆ.

ಕಾಫಿ ತೋಟ ದೊಳಗೆ ಹಿಂಡು ಹಿಂಡಾಗಿ ನುಗ್ಗಿ ಆನೆಗಳು ನಡೆಸುವ ದಾಂಧಲೆಯಿAದ ಸಂಪೂರ್ಣ ಫಸಲು ನಷ್ಟಗೊಂಡು ಬೆಳಗಾರ ಸಂಕಷ್ಟದ ದಿನಗಳನ್ನು ಅನುಭವಿಸುತ್ತಿದ್ದಾನೆ. ಆನೆಗಳ ದಾಳಿಯಿಂದ ಕಾಫಿ, ಅಡಿಕೆ, ತೆಂಗು, ಬಾಳೆ ಸೇರಿದಂತೆ ಫಸಲು ಭರಿತ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ.

ಕಳೆದ ೧೫ ದಿನಗಳಿಂದ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾರಿಕಟ್ಟೆ ಗ್ರಾಮದ ಜಿ.ಜೆ. ವಿಜಯ ಅವರ ಕಾಫಿ ತೋಟದಲ್ಲಿ ಹತ್ತಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟು ಆತಂಕವನ್ನು ಸೃಷ್ಟಿಸಿದೆ. ವಿಜಯ ಅವರ ಕಾಫಿ ತೋಟದಲ್ಲಿ ಬೀಡುಬಿಟ್ಟ ಆನೆಗಳು ಕಾಫಿ ಗಿಡಗಳನ್ನು ನಾಶಪಡಿಸಿದ್ದಲ್ಲದೆ, ಉತ್ತಮ ಫಸಲು ಭರಿತ ಅಡಿಕೆ, ಬಾಳೆ, ತೆಂಗು ಗಿಡಗಳನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಅಲ್ಲದೆ ಕಾಫಿ ತೋಟಗಳಿಗೆ ನೀರು ಹಾಯಿಸಲು ಇಟ್ಟಿದ್ದ ಪೈಪುಗಳನ್ನು ತುಳಿದು ಹಾನಿಪಡಿಸಿವೆ. ಆನೆ ದಿಗ್ಬಂದನಕ್ಕೆ ಅಳವಡಿಸಿದ ಸೋಲಾರ್ ಬೇಲಿಗಳನ್ನು ಕಿತ್ತು ನಾಶಪಡಿಸಿದೆ. ವಿಜಯ್ ಅವರಿಗೆ ಸೇರಿದ ತೋಟದಲ್ಲಿ ಆನೆಗಳು ಬೀಡು ಬಿಟ್ಟು ನೀಡುತ್ತಿರುವ ಉಪಟಳದಿಂದ ಸುಮಾರು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಕಾಫಿ ತೋಟ ಮತ್ತು ಕೃಷಿ ಚಟುವಟಿಕೆಗಳಿಗೆ ಬರುವ ಕೂಲಿ ಕಾರ್ಮಿಕರು ಆನೆ ಹಿಂಡು ಕಂಡು ಕೆಲಸಕ್ಕೆ ಹೋಗುವುದಕ್ಕೂ ಹಿಂದು-ಮುAದು ನೋಡುವಂತಹ ಪರಿಸ್ಥಿತಿ ಬಂದೊದಗಿದೆ. ಇದೇ ಮಾರ್ಗದಲ್ಲಿ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿರುವು ದರಿಂದ ಗ್ರಾಮಸ್ಥರ ಆತಂಕ ಹೆಚ್ಚಾಗಿದೆ. ಕೂಡಲೇ ಕಾಡಾನೆ ಕಾರ್ಯಾಚರಣೆ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. -ಎನ್.ಎನ್. ದಿನೇಶ್