ಶನಿವಾರಸAತೆ, ಫೆ. ೨೨: ಅಶ್ಲೀಲ ಭಾವಚಿತ್ರವನ್ನು ಬೇರೆಯವರ ಮೊಬೈಲ್‌ಗೆ ಕಳುಹಿಸಿರುವುದಾಗಿ ಆರೋಪಿಸಿ ಪತ್ನಿ ತನ್ನ ಸಹೋದರರ ಜೊತೆ ಸೇರಿ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶನಿವಾರಸಂತೆ ಸಮೀಪ ಗ್ರಾಮವೊಂದರಲ್ಲಿ ನಡೆದಿದೆ.

ಕೂಲಿ ಕಾರ್ಮಿಕ ರಾಜು ಹಲ್ಲೆಗೊಳಗಾದವರು. ಪತ್ನಿ ಅಭಿಲಾಷಾ ಆಕೆಯ ಸಹೋದರರಾದ ವೀರಾಜಪೇಟೆ ಶಿವಕೇರಿಯ ಎಚ್.ಪಿ. ಮಧುಸೂದನ್ ಮತ್ತು ಅಭಿಷೇಕ್ ಆರೋಪಿಗಳು. ರಾಜು ಮನೆಯಲ್ಲಿ ಕಿರುಚಾಡುವ ಶಬ್ದ ಕೇಳಿ ಪಕ್ಕದ ಮನೆಯಲ್ಲಿದ್ದ ರಾಜು ಸಹೋದರ ವೆಂಕಟೇಶ್ ಹಾಗೂ ಪುತ್ರ ಶುಭಕರ ಹೋಗಿ ನೋಡಿದಾಗ ತಮ್ಮನ ಮೇಲೆ ಆತನ ಪತ್ನಿ ಅಭಿಲಾಷಾ ಹಾಗೂ ಆಕೆಯ ಸಹೋದರರು ಲಟ್ಟಣಿಗೆ, ಕಬ್ಬಿಣದ ರಾಡು, ಕೊಡಲಿ ಹಾಗೂ ಸೌದೆಯಿಂದ ಹಲ್ಲೆ ಮಾಡುತ್ತಾ ಗಾಯಗೊಳಿಸಿದರು ಎನ್ನಲಾಗಿದೆ.

ಗಲಾಟೆ ಕೇಳಿ ಪಕ್ಕದ ಮನೆಯಲ್ಲಿದ್ದ ರಾಜು ತಂದೆ ಕೆಂಚಪ್ಪ ಮತ್ತು ಇನ್ನೋರ್ವ ಪುತ್ರ ನಾಗರಾಜು ಸಹ ಬಂದು ಜಗಳ ಬಿಡಿಸಿದರು. ಗಾಯಾಳು ಮಗ ರಾಜುವನ್ನು ತಂದೆ ಮಕ್ಕಳು ಆ್ಯಂಬ್ಯುಲೆನ್ಸ್ನಲ್ಲಿ ಅರಕಲಗೂಡು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಜು ಸಹೋದರ ವೆಂಕಟೇಶ್ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಸಿಬ್ಬಂದಿ ಶಶಿಕುಮಾರ್, ಪ್ರದೀಪ್‌ಕುಮಾರ್, ಲೋಕೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳಾದ ಮಧುಸೂದನ್ ಮತ್ತು ಅಭಿಲಾಷಾರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಠಾಣೆಯಲ್ಲಿ ಎಎಸ್‌ಐ ಶಿವಲಿಂಗ ಕಾಲಂ ೩೨೪, ೩೦೭ರೆ/ವಿ.೩೪ ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತಾರೆ.